ಮುಂಬೈ: ಸಹೋದರ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರವೀಣ್ ಮಹಾಜನ್ ಮಿದುಳಿನ ಆಘಾತಕ್ಕೆ ಒಳಗಾಗಿದ್ದು, ಥಾಣೆಯಲ್ಲಿನ ಆಸ್ಪತ್ರೆಯೊಂದರ ತುರ್ತು ನಿಗಾ ವಿಭಾಗಕ್ಕೆ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿದೆ.
ನವೆಂಬರ್ ಮಾಸಾಂತ್ಯದಿಂದ 14 ದಿನಗಳ ಪೆರೋಲ್‌ನಲ್ಲಿ ಪತ್ನಿ ಸಾರಂಗಿಯನ್ನು ಭೇಟಿಯಾಗಲು ಜೈಲಿನಿಂದ ಹೊರ ಬಂದಿದ್ದ ಪ್ರವೀಣ್, ಮಿದುಳಿನ ರಕ್ತಸ್ರಾವದಿಂದಾಗಿ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಅವರನ್ನು ತುರ್ತು ನಿಗಾ ವಿಭಾಗದಲ್ಲಿರಿಸಲಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರವೀಣ್ ದಾಖಲಾಗಿರುವ ಜ್ಯೂಪಿಟರ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಅತಿ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸಕ್ತ ಅವರ ಆರೋಗ್ಯ ಗಂಭೀರವಾಗಿದೆ ಎಂದು ಸಹೋದರ ಪ್ರಕಾಶ್ ಮಹಾಜನ್ ವಿವರಣೆ ನೀಡಿದ್ದಾರೆ.
2006ರ ಏಪ್ರಿಲ್ 22ರಂದು ಪ್ರಮೋದ್ ಮಹಾಜನ್ ಅವರನ್ನು ಅವರ ವೋರ್ಲಿಯಲ್ಲಿನ ಮನೆಯಲ್ಲಿ ಹತ್ಯೆ ಮಾಡಿದುದಕ್ಕಾಗಿ ಮುಂಬೈಯ ನ್ಯಾಯಾಲಯವೊಂದು ಪ್ರವೀಣ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ನಾಸಿಕ್ ಸೆಂಟ್ರಲ್ ಜೈಲಿನಲ್ಲಿ ಅವರನ್ನು ಇರಿಸಲಾಗಿತ್ತು.
ನವೆಂಬರ್ 27ರಂದು ಅವರಿಗೆ 14 ದಿನಗಳ ಪೆರೋಲ್ ನೀಡಲಾಗಿದ್ದು, ಶನಿವಾರಕ್ಕೆ ಅಂತ್ಯಗೊಳ್ಳುತ್ತಿದೆ. ಆರೋಗ್ಯ ಸಮಸ್ಯೆಯ ಕಾರಣಕ್ಕಾಗಿಯೇ ಪೆರೋಲ್ ನೀಡಲಾಗಿತ್ತು ಎಂದು ಮೂಲಗಳು ಹೇಳಿವೆ.