ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರಸೇವಕರ ಕುಟುಂಬಿಕರಿಂದ ಆರೆಸ್ಸೆಸ್, ಅಡ್ವಾಣಿಗೆ ಶಾಪ! (Ayodhya | Kar Sevak | RSS | LK Advani)
Bookmark and Share Feedback Print
 
ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಧ್ವಂಸದಲ್ಲಿ ಪಾಲ್ಗೊಂಡು ಕೊಲ್ಲಲ್ಪಟ್ಟ ಕರಸೇವಕರ ಕುಟುಂಬದವರು ತಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬಾಬ್ರಿ ಮಸೀದಿಯನ್ನು ಕೆಡವಿ ಆ ಜಾಗದಲ್ಲಿ ಶ್ರೀರಾಮ ಮಂದಿರವನ್ನು ಕಟ್ಟಬೇಕೆಂಬ ಉದ್ದೇಶವನ್ನಿಟ್ಟುಕೊಂಡ ಹಿಂದೂ ಕರಸೇವಕರು ಈ ಚಳುವಳಿಯಲ್ಲಿ ಪ್ರವಾಹೋಪಾದಿಯಾಗಿ ಭಾಗವಹಿಸಿದ್ದರು.

ಮುಖಂಡರ ಕರೆಗಳಿಗೆ ಓಗೊಟ್ಟು ಮುಂದುವರಿದ ಕರಸೇವಕರು ಬಾಬ್ರಿ ಮಸೀದಿಯನ್ನೇನೋ ಧ್ವಂಸ ಮಾಡಿದರು. ಈ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಹಲವು ಮಂದಿ ಪ್ರಾಣವನ್ನೂ ತೆರಬೇಕಾಯಿತು. ಆದರೆ ಸಾವನ್ನಪ್ಪಿದ್ದ ಕರಸೇವಕರ ಕುಟುಂಬಸ್ಥರಿಗೆ ಬಿಜೆಪಿ ನಾಯಕರು ಮತ್ತು ಸಂಘಪರಿವಾರ ನೀಡಿದ್ದ ಭರವಸೆಗಳನ್ನು ಇನ್ನೂ ಈಡೇಸಲಾಗಿಲ್ಲ. ನಮ್ಮನ್ನು ಈಗ ಅವರು ಮರೆತೇ ಹೋಗಿದ್ದಾರೆ ಎಂದು ಗಂಡ, ಮಕ್ಕಳು, ಸಹೋದರನ್ನು ಕಳೆದುಕೊಂಡ ಕುಟುಂಬಸ್ಥರೀಗ ಶಾಪ ಹಾಕುತ್ತಿದ್ದಾರೆ.

ಅಯೋಧ್ಯಾ ಘಟನೆಯಲ್ಲಿ ನಾನು ಗಂಡನನ್ನು ಕಳೆದುಕೊಂಡಿದ್ದು, ಇದೀಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನನ್ನ ಬದುಕಿಗೆ ಇಟ್ಟುಕೊಂಡಿರುವ ಈ ಚಿಕ್ಕ ಅಂಗಡಿ ಏನೇನೂ ಸಾಲುತ್ತಿಲ್ಲ. ನನ್ನ ಮಗನೊಬ್ಬನಿಗೆ ಉದ್ಯೋಗ ಮತ್ತು ಮನೆಯೊಂದನ್ನು ನೀಡುವುದಾಗಿ ಆಶ್ವಾಸನೆ ನೀಡಿದ್ದ ಸಂಘವು ಈಗ ಮಾತೇ ಆಡುತ್ತಿಲ್ಲ. ಅವರೀಗ ನಮ್ಮ ಭೇಟಿಗೂ ಸಿಗುತ್ತಿಲ್ಲ ಎಂದು ಉತ್ತರ ಪ್ರದೇಶದ ವಾಸುದೇವ ಗುಪ್ತಾ ಎಂಬ ಮೃತ ಕರಸೇವಕನ ಪತ್ನಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಇದೇ ರೀತಿಯ ತನ್ನ ನೋವುಗಳನ್ನು ತೋಡಿಕೊಂಡಿರುವ ಕರಸೇವಕನೊಬ್ಬನ ತಂದೆಯೊಬ್ಬರು, ಬಿಜೆಪಿ ಮುಖ್ಯಸ್ಥ ಅಡ್ವಾಣಿಯವರು ಇದೀಗ ನಮ್ಮನ್ನು ಭೇಟಿಯಾಗಲೂ ಬಯಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆದರೂ ನಾನು ಮತ್ತು ಪತ್ನಿ ಅಡ್ವಾಣಿಯವರನ್ನು ಭೇಟಿಯಾಗಿ, ಅಯೋಧ್ಯೆ ಚಳುವಳಿಯಲ್ಲಿ ಬಲಿಯಾದ ಮಗನ ಹೆತ್ತವರು ನಾವು ಎಂದು ಪರಿಚಯಿಸಿಕೊಂಡೆವು. ನಮ್ಮ ಮಕ್ಕಳಲ್ಲೊಬ್ಬರಿಗೆ ಉದ್ಯೋಗ ಮತ್ತು ಮನೆ ನಿರ್ಮಿಸಿಕೊಡುತ್ತೇವೆಂದು ನೀಡಿದ್ದ ಭರವಸೆಯನ್ನು ಅವರಿಗೆ ನೆನಪಿಸಿದೆವು. ಖಂಡಿತಾ ನಿಮ್ಮ ಕುಟುಂಬಕ್ಕೆ ಸಹಾಯ ಮಾಡುತ್ತೇವೆ ಎಂದು ಅಡ್ವಾಣಿ ತನ್ನ ಮಾತನ್ನು ಪುನರುಚ್ಛರಿಸಿದರು.

ಆದರೆ ಇದುವರೆಗೂ ನಮಗೆ ಯಾವ ರೀತಿಯ ಸಹಕಾರವೂ ಅವರಿಂದ ಬಂದಿಲ್ಲ. ಆ ಬಳಿಕ ಮತ್ತೊಮ್ಮೆ ಅಡ್ವಾಣಿ ಮನೆಗೆ ತೆರಳಿ ನಮ್ಮ ಬೇಡಿಕೆಗಳ ಪಟ್ಟಿಯೊಂದನ್ನು ನೀಡಲು ಯತ್ನಿಸಿದರೂ, ಅವರು ನಮ್ಮನ್ನು ಭೇಟಿಯಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು ಎಂದು ಬಲಿದಾನಗೈದ ಕರಸೇವಕ ರಾಜೇಂದ್ರನ ದುಃಖತಪ್ತ ತಂದೆ ವಿವರಣೆ ನೀಡಿದ್ದಾರೆ.

17 ವರ್ಷಗಳ ಹಿಂದಿನ ಅಯೋಧ್ಯೆ ಗಲಭೆ ದೇಶದಾದ್ಯಂತ ಪಸರಿಸಿ ಭಾರೀ ಕೋಮು-ಗಲಭೆಗಳು ನಡೆದಿದ್ದವು. ಈ ಸಂದರ್ಭದಲ್ಲಿ 2,000ಕ್ಕೂ ಹೆಚ್ಚು ಮಂದಿ ದೇಶದಾದ್ಯಂತ ಬಲಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ