ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಕಿತ್ತು ಹೊಸ ರಾಜ್ಯ ಸ್ಥಾಪಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಸತತ ಎರಡನೇ ದಿನವೂ ಮುಂದುವರಿದಿದ್ದು, ಭಾರೀ ಹಿಂಸಾಚಾರಗಳು ನಡೆಯುತ್ತಿವೆ.
ಆಂಧ್ರ ಕರಾವಳಿ ಮತ್ತು ರಾಯಲಸೀಮೆ ಪ್ರಾಂತ್ಯಗಳಲ್ಲಿ ಜನತೆ ಭಾರೀ ಸಂಖ್ಯೆಯಲ್ಲಿ ರಸ್ತೆಗಿಳಿದು ಹಿಂಸಾಚಾರಗಳಲ್ಲಿ ನಿರತರಾಗಿದ್ದಾರೆ. ಅನಂತಪುರ, ವಿಶಾಖಪಟ್ಟಣಂ, ವಿಜಯನಗರಂ ಮುಂತಾದ ಪ್ರಮುಖ ಪ್ರದೇಶಗಳಲ್ಲಿ ರಸ್ತೆ ತಡೆ, ಅಗ್ನಿಸ್ಪರ್ಶ ಮುಂತಾದ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.
ಅನಂತಪುರಂನಲ್ಲಿ ಭಾರೀ ಪ್ರಮಾಣದ ಬಿಎಸ್‌ಎನ್ಎಲ್ ಕೇಬಲ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಮುಗಿಲೆತ್ತರಕ್ಕೆ ಧೂಮ ಹರಡಿಕೊಂಡಿದೆ.
ಮತ್ತೊಂದೆಡೆ ವಿಶಾಖಪಟ್ಟಣದಲ್ಲಿ ವಿದ್ಯಾರ್ಥಿಗಳು ಆರಂಭಿಸಿರುವ ಆಮರಣಾಂತ ಉಪವಾಸ ಇಂದು ಕೂಡ ಮುಂದುವರಿದಿದೆ. ಅಲ್ಲದೆ ಇಂದು ಪ್ರತಿಭಟನಾಕಾರರು ಸಾರ್ವಜನಿಕ ರ‌್ಯಾಲಿಗಳನ್ನು ನಡೆಸುವ ಬಗ್ಗೆಯೂ ಯೋಜನೆಗಳನ್ನು ರೂಪಿಸಿದ್ದಾರೆ.
ಇದೇ ರೀತಿಯ ಉಪವಾಸ ಸತ್ಯಾಗ್ರಹಗಳು ರಾಯಲಸೀಮೆ ಪ್ರಾಂತ್ಯದ ಕಡಪ, ಕರ್ನೂಲ್ ಮತ್ತು ಚಿತ್ತೂರ್ ಜಿಲ್ಲೆಗಳಲ್ಲೂ ಕಾಣಿಸಿಕೊಂಡಿದ್ದು, ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಜನತೆ ತೆಲಂಗಾಣ ಪ್ರತ್ಯೇಕ ರಾಜ್ಯ ವಿರೋಧಿಸಿ ಉಪವಾಸ ನಿರತರಾಗಿದ್ದಾರೆ.
ವಿಜಯವಾಡದಲ್ಲಿ ಬ್ಯಾಂಕುಗಳು, ಎಟಿಎಂ ಮತ್ತು ಇತರ ವ್ಯವಹಾರ ಕೇಂದ್ರಗಳು ಇಂದು ತೆರೆದಿಲ್ಲ. ವಾಹನಗಳ ಓಡಾಟವೂ ವಿರಳವಾಗಿದೆ ಎಂದು ವರದಿಗಳು ಬಂದಿವೆ.
ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದ ನಂತರ ಇಂದು ಅಪರಾಹ್ನ ಬಸ್ಸುಗಳನ್ನು ರಸ್ತೆಗಿಳಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವಿಜಯವಾಡದ ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಟ್ರಾಫಿಕ್ ಉಪ ವ್ಯವಸ್ಥಾಪಕ ಸುಧಾಕರ್ ತಿಳಿಸಿದ್ದಾರೆ.
ರೈಲು ತಡೆ ಮತ್ತು ಇತರ ಅಹಿತಕರ ಘಟನೆಗಳು ನಡೆಯುತ್ತಿರುವುದರಿಂದ ರೈಲುಗಾಡಿಗಳ ವೇಗದ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ವಿಜಯವಾಡ ರೈಲ್ವೇ ಸ್ಟೇಷನ್ ಮ್ಯಾನೇಜರ್ ಭಾಸ್ಕರ್ ಹೇಳಿದ್ದಾರೆ.
ಕಾಂಗ್ರೆಸ್, ತೆಲುಗು ದೇಶಂ ಮತ್ತು ಪ್ರಜಾರಾಜ್ಯಂ ಪಕ್ಷಗಳು ಇಂದು ಅಪರಾಹ್ನ ಸಭೆ ಸೇರಿ ಮುಂದಿನ ಕ್ರಮಗಳ ಕುರಿತು ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ಹೈದರಾಬಾದ್ ಅಥವಾ ವಿಜಯವಾಡದಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಅವರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ ಎಂದು ಅವರ ನಿಕಟ ಮೂಲಗಳು ಹೇಳಿವೆ.
ರಾಜಿನಾಮೆ ವಾಪಸ್ ಪಡೆಯಿರಿ: ಸರಕಾರ ಈ ನಡುವೆ ಭಾವೋದ್ರೇಕಕ್ಕೊಳಗಾಗಿ ರಾಜಿನಾಮೆ ಸಲ್ಲಿಸಿರುವ ಶಾಸಕರು ಸಂಯಮದಿಂದ ವರ್ತಿಸಬೇಕು ಮತ್ತು ನೀಡಿರುವ ರಾಜಿನಾಮೆಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಂಧ್ರಪ್ರದೇಶ ಸರಕಾರದ ಮುಖ್ಯ ಸಚೇತಕ ಎಂ. ಭಟ್ಟಿ ವಿಕ್ರಮಾರ್ಕ ಸೂಚಿಸಿದ್ದಾರೆ.
ನಾಯಕರೇ ಭಾವೋದ್ರೇಕಕ್ಕೊಳಗಾಗಿ ರಾಜಿನಾಮೆ ಸಲ್ಲಿಸಿದರೆ ಪರಿಸ್ಥಿತಿ ಹತೋಟಿಗೆ ಬರುವುದು ಕಷ್ಟ. ಎಲ್ಲಾ ಶಾಸಕ ಸಹೋದರರು ತಮ್ಮ ರಾಜಿನಾಮೆಗಳನ್ನು ಮರಳಿ ಪಡೆದುಕೊಳ್ಳಬೇಕೆಂದು ನಾನು ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.