ರಾಜಸ್ತಾನದ ಬಡ ದಲಿತ ಕುಟುಂಬವೊಂದನ್ನಿಡೀ ಫ್ಯಾಕ್ಟರಿಯೊಂದಕ್ಕೆ ಪ್ರಭಾವಿ ರಜಪೂತರು ಜುಜುಬಿ ಕೆಲವು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ಕ್ರೂರ ಪ್ರಸಂಗ ಬಯಲಿಗೆ ಬಂದಿದೆ.
ಅಜ್ಮೀರ್ ಜಿಲ್ಲೆಯಲ್ಲಿನ ಟಾಂಕ್ ಎಂಬಲ್ಲಿನ ಫರ್ನೇಸ್ ಫ್ಯಾಕ್ಟರಿಯೊಂದಕ್ಕೆ ಕೇವಲ 2.75 ಲಕ್ಷ ರೂಪಾಯಿಗಳಿಗೆ ಇಡೀ ದಲಿತ ಕುಟುಂಬವನ್ನೇ ಮಾರಿದ ಘಟನೆ ಬಹಿರಂಗವಾಗುತ್ತಲೇ ಇಲ್ಲಿನ ನ್ಯಾಯಾಲಯವೊಂದು ದುರುಳರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದೆ.
ಮಹಾವೀರ್, ಅವನ ಪತ್ನಿ ಶಾರದಾ, ಮಕ್ಕಳಾದ ರಾಕೇಶ್, ಮುಖೇಶ್, ಗೀಸ್ಲಾಲ್, ಚಿತ್ತಾರ್ ಮತ್ತವನ ಪತ್ನಿ ಸಜನಿಯನ್ನು ಕಳೆದ ವರ್ಷವೇ ಕಾರ್ಖಾನೆಯೊಂದಕ್ಕೆ ಮಾರಲಾಗಿತ್ತಾದರೂ, ಇದು ಹೊರ ಜಗತ್ತಿಗೆ ತಿಳಿದದ್ದು ಅವರು ಗುಲಾಮತನದಿಂದ ತಪ್ಪಿಸಿಕೊಂಡಾಗ. ಅದುವರೆಗೆ ಅವರು ಪಟ್ಟ ಯಾತನೆಗಳನ್ನು ಇದೀಗ ಪರಿಪರಿಯಾಗಿ ವಿವರಿಸುತ್ತಿದ್ದಾರೆ.
ಈ ಏಳು ಮಂದಿಯ ಕುಟುಂಬವನ್ನು ಅಕ್ರಮವಾಗಿ ಮಾರಾಟ ಮಾಡಿದ ವರ್ಷದ ನಂತರ ಅಡ್ಡೆಯಿಂದ ತಪ್ಪಿಸಿಕೊಂಡು ತಮ್ಮ ಹುಟ್ಟೂರು ಅಜ್ಮೀರ್‌ನ ಸುನಾರಿಯಾ ಗ್ರಾಮ ತಲುಪಿದ್ದ ಬಡಪಾಯಿಗಳಿಗೀಗ ನ್ಯಾಯಾಲಯ ರಕ್ಷಣೆ ನೀಡುವ ಭರವಸೆ ನೀಡಿದೆ.
ಕಳೆದ ವರ್ಷ ಇಲ್ಲಿನ ರಜಪೂತ ಕುಟುಂಬದ ಸದಸ್ಯರು ದಲಿತ ಕುಟುಂಬದ ಮನೆಯನ್ನು ಸುಟ್ಟು ಹಾಕಿ, ಕ್ರೂರವಾಗಿ ಥಳಿಸಿದ ನಂತರ ಅರಣ್ಯ ಪ್ರದೇಶವೊಂದರಲ್ಲಿ ಜೀತದಾಳುಗಳಂತೆ ನಡೆಸಿಕೊಂಡಿದ್ದರು. ಅಲ್ಲಿಂದ ತಪ್ಪಿಸಿಕೊಂಡ ನಂತರ ಘಟನೆಯ ವಿವರಗಳನ್ನು ತಿಳಿದುಕೊಂಡ ಅಜ್ಮೀರ್ ಮೂಲದ ವಕೀಲರೊಬ್ಬರು ಪ್ರಕರಣವನ್ನು ಕೈಗೆತ್ತಿಕೊಂಡು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸರ್ವಾರ್‌ನಲ್ಲಿನ ನ್ಯಾಯಾಲಯವೊಂದು ಆರೋಪಿಗಳಾದ ಗೋಪಾಲ್, ಭೂಪಿಂದರ್, ಪ್ರಹ್ಲಾದ್ ಮತ್ತು ಹನುಮಾನ್ ಭೀಲ್ ವಿರುದ್ಧ ಕೇಸು ದಾಖಲಿಸಲು ಪೊಲೀಸರಿಗೆ ಆದೇಶಿಸಿದೆ.
ಕಳೆದ ವರ್ಷ ಗೋಪಾಲ್, ಭೂಪಿಂದರ್ ಮತ್ತು ಪ್ರಹ್ಲಾದ್ ನಮ್ಮನ್ನು ಟಾಂಕ್ ಎಂಬಲ್ಲಿಗೆ ಜೀಪಿನಲ್ಲಿ ಕರೆದುಕೊಂಡು ಹೋಗಿ, ಕುಲುಮೆ ಕಾರ್ಖಾನೆಯೊಂದರಲ್ಲಿ ಬಿಟ್ಟರು. ನಾವು ಅಲ್ಲಿ ಪ್ರತೀ ದಿನ 15ರಿಂದ 16 ಗಂಟೆಗಳಷ್ಟು ಕೆಲಸ ಮಾಡಬೇಕಿತ್ತು ಎಂದು ಮಹಾವೀರ್ ತಮ್ಮ ಪಾಡುಗಳನ್ನು ವಿವರಿಸಿದ್ದಾರೆ.
ನಿಮ್ಮ ವೇತನವನ್ನು ಈಗಾಗಲೇ ಮಾಲಕರಿಗೆ ಪಾವತಿ ಮಾಡಿ ಆಗಿರುವುದರಿಂದ ನಿಮಗೆ ಯಾವುದೇ ಸಂಭಾವನೆ ನೀಡುವುದು ಅಸಾಧ್ಯ ಎಂದು ಫ್ಯಾಕ್ಟರಿ ಮಾಲಕ ಹೇಳಿದ್ದ. ನಮಗಲ್ಲಿ ಅತೀ ಕಡಿಮೆ ಊಟವನ್ನು ಕೊಡಲಾಗುತ್ತಿತ್ತು ಮತ್ತು ಯಾವುದೇ ಕಾರಣಕ್ಕೂ ಹೊರ ಹೋಗಲು ಅವಕಾಶ ನೀಡುತ್ತಿರಲಿಲ್ಲ ಎಂದು ಶಾರದಾ ತನ್ನ ಅನುಭವವನ್ನು ಬಿಚ್ಚಿಟ್ಟಿದ್ದಾರೆ.