ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು ಇಂದಿಗೆ 8ವರ್ಷ ಸಂದಿದೆ. ಸಂಸತ್ ಭವನದ ಮೇಲೆ ದಾಳಿ ನಡೆದ ಸಂದರ್ಭ ಬಲಿಯಾದ ಹುತಾತ್ಮರಿಗಾಗಿ ಸಂಸತ್‌ನಲ್ಲಿ ಭಾನುವಾರ ಪುಷ್ಪ ನಮನ ಸಲ್ಲಿಸಲಾಯಿತಾದರೂ ಕೂಡ ಬಹುತೇಕ ಸಂಸದರಿಗೆ ಈ ದಿನ ಮರೆತೇ ಹೋಗಿದ್ದು, 11 ಸಂಸದರನ್ನು ಹೊರತು ಪಡಿಸಿ ಉಳಿದೆಲ್ಲಾ ಸಂಸದರು ಗೈರುಹಾಜರಾಗಿದ್ದರು.!
2001ರ ಡಿಸೆಂಬರ್ 13ರಂದು ಸಂಸತ್ ಮೇಲೆ ದಾಳಿ ನಡೆದ ಸಂದರ್ಭ ಹುತಾತ್ಮರಾದವರಿಗೆ ಸಂಸತ್ ಕಾಂಪ್ಲೆಕ್ಸ್‌ನಲ್ಲಿ ಇಂದು ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಾಜರಿದ್ದ ಸಂಸದರ ಸಂಖ್ಯೆ ಕೇವಲ 11!. ಅವರೊಂದಿಗೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಡಾ.ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಲೋಕಸಭೆಯ ಸ್ಪೀಕರ್ ಮೀರಾ ಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ.
ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸುವ ಈ ವೇಳೆಯಲ್ಲಿ ಬೆರಳೆಣಿಕೆಯ ಸಂಸದರಷ್ಟೇ ಹಾಜರಿದ್ದರೆ, ಉಳಿದ ಸಂಸದರೆಲ್ಲ ಭಾನುವಾರದ ರಜೆಯ ಮೂಡ್‌ನಲ್ಲಿದ್ದರು.
ನಿಜಕ್ಕೂ ಈ ಎಲ್ಲಾ ಸಂಸದರು ತಮ್ಮ ಕ್ಷೇತ್ರಗಳಲ್ಲಿನ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರೆ ಎಂಬುದು ಪ್ರಶ್ನೆಯಾಗಿದೆ. ಕನಿಷ್ಠ ಪಕ್ಷ ಸಂಸತ್ ಭವನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಹುತಾತ್ಮರಿಗೆ ಗೌರವ ಸಲ್ಲಿಸುವ ಸೌಜನ್ಯವೂ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ.
2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ಐದು ಮಂದಿ ಉಗ್ರರು ಗುಂಡಿನ ಮಳೆಗೆರದ ಪರಿಣಾಮ 9ಮಂದಿ ಬಲಿಯಾಗಿದ್ದರು. ಇದರಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ದೆಹಲಿಯ ಐದು ಮಂದಿ ಪೊಲೀಸ್ ಅಧಿಕಾರಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಗುಂಡಿನ ದಾಳಿಯಲ್ಲಿ ಐದು ಮಂದಿ ಉಗ್ರರು ಹತರಾಗಿದ್ದರು.