ಸಣ್ಣ ರಾಜ್ಯಗಳ ರಚನೆಯೇ ಅವೈಜ್ಞಾನಿಕವಾಗಿದೆ ಎಂದು ಹೇಳಿರುವ ಆಂಧ್ರಪ್ರದೇಶ ಕಾಂಗ್ರೆಸ್ ಸಂಸದ ಎಲ್.ರಾಜಗೋಪಾಲ್, ಆಂಧ್ರಪ್ರದೇಶವನ್ನು ಒಡೆದು ಪ್ರತ್ಯೇಕ ತೆಲಂಗಾಣವನ್ನು ರಚಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾನುವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ,ನಾವು ಯಾವುದೇ ಕಾರಣಕ್ಕೂ ಆಂಧ್ರಪ್ರದೇಶ ಒಡೆಯಲು ಬಿಡುವುದಿಲ್ಲ. ಯಾಕೆ ಅನಾವಶ್ಯಕವಾಗಿ ಆಂಧ್ರವನ್ನು ಇಬ್ಭಾಗ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಆಡಳಿತಾರೂಢ ಕಾಂಗ್ರೆಸ್‌ನ ರಾಜಗೋಪಾಲ ಸೇರಿದಂತೆ 130ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರತ್ಯೇಕ ತೆಲಂಗಾಣ ರಚನೆಗೆ ಕೇಂದ್ರ ಗ್ರೀನ್ ಸಿಗ್ನಲ್ ನೀಡುವ ಮೂಲಕ ಆಂಧ್ರಪ್ರದೇಶದ ಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ಅವರು ಹೇಳಿದರು. ಹಾಗಾಗಿ ನಾವೆಲ್ಲ ಇದೀಗ ಪ್ರತ್ಯೇಕ ತೆಲಂಗಾಣ ರಾಜ್ಯ ವಿರೋಧಿ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ಹೇಳಿದರು.
ಸಣ್ಣ, ಸಣ್ಣ ರಾಜ್ಯ ರಚಿಸಿ ದೇಶ ವಿಭಜನೆ ಮಾಡುವುದು ಸರಿಯಲ್ಲ ಎಂದಿರುವ ರಾಜಗೋಪಾಲ್, ಆಂಧ್ರಪ್ರದೇಶದಲ್ಲಿನ 23ಜಿಲ್ಲೆಗಳಲ್ಲಿಯೂ ತೆಲುಗು ಭಾಷಿಕರಿದ್ದಾರೆ. ಹೈದರಾಬಾದ್ ಆಂಧ್ರಪ್ರದೇಶಕ್ಕೆ ತಾಯಿ ಇದ್ದಂತೆ, ಉಳಿದ 22ಜಿಲ್ಲೆಗಳು ಅದರ ಮಕ್ಕಳು. ಆ ನೆಲೆಯಲ್ಲಿ ತಾಯಿ ಮತ್ತು ಮಕ್ಕಳನ್ನು ಬೇರ್ಪಡಿಸಲು ಬಿಡುವುದಿಲ್ಲ ಎಂದು ತಿಳಿಸಿದರು.