ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರ ರಾಜಕೀಯ ಬಿಕ್ಕಟ್ಟು: ಮುಂದುವರಿಯಲಿದೆ ಟಿಆರ್ಎಸ್ ಮೌನ (TRS | Telangana | Congress | Andhra Pradesh)
Bookmark and Share Feedback Print
 
ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಯಶಸ್ವಿಯಾದ ನಂತರ ಇದೀಗ ಭುಗಿಳೇಳುತ್ತಿರುವ ವಿರೋಧಿ ಅಲೆಯ ಬಗ್ಗೆ ಟಿಆರ್ಎಸ್ ತನ್ನ ಮೌನವನ್ನು ಮುಂದುವರಿಸಲಿದ್ದು, ಸಮಸ್ಯೆಯನ್ನು ಪರಿಹರಿಸುವುದು ಕಾಂಗ್ರೆಸ್ ಹೈಕಮಾಂಡ್ ಜವಾಬ್ದಾರಿ ಎಂದು ತಿಳಿಸಿದೆ.

ಪ್ರಸಕ್ತ ಆಂಧ್ರಪ್ರದೇಶದಲ್ಲಿ ಏನು ನಡೆಯುತ್ತಿದೆಯೋ, ಅದಕ್ಕೆ ಕಾರಣ ಕಾಂಗ್ರೆಸ್, ಟಿಡಿಪಿ ಮತ್ತು ಪಿಆರ್‌ಪಿ ಪಕ್ಷಗಳ ಆಂತರಿಕ ಸಮಸ್ಯೆಗಳೇ ಕಾರಣ ಎಂದು ತೆಲಂಗಾಣ ರಾಷ್ಟ್ರೀಯ ಹೋರಾಟ ಸಮಿತಿ ಹಿರಿಯ ಮುಖಂಡ ಕ್ಯಾಪ್ಟನ್ ಲಕ್ಷ್ಮೀಕಾಂತ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದ ಈ ಎಲ್ಲಾ ಪಕ್ಷಗಳು ತಮ್ಮ ನಿಜ ಬಣ್ಣವನ್ನು ಬಯಲುಗೊಳಿಸಿವೆ ಮತ್ತು ಅದರ ಸದಸ್ಯರು ಪ್ರಾಂತೀಯ ಆಧಾರದಲ್ಲಿ ವಿಭಜನೆಗೊಳ್ಳುತ್ತಿದ್ದಾರೆ. ಪ್ರಸಕ್ತ ವಿಷಯದ ಬಗ್ಗೆ ಅವರು ಒಂದು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡು ಜನತೆಗೆ ತಿಳಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಟಿಆರ್ಎಸ್ ಪ್ರಸಕ್ತ ನಡೆಯುತ್ತಿರುವ ವಿದ್ಯಮಾನಗಳನ್ನು ತೀರಾ ಹತ್ತಿರದಿಂದ ನೋಡುತ್ತಿದ್ದು, ಇದನ್ನು ಕೇಂದ್ರವೇ ಪರಿಹರಿಸಬೇಕು ಎಂಬುದು ಅದರ ಅಭಿಪ್ರಾಯ. ಆದರೆ ಪ್ರತ್ಯೇಕ ರಾಜ್ಯ ರಚನೆಯನ್ನು ಯಾವುದೇ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ ಎಂದು ರಾವ್ ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ರಾಜ್ಯ ರಚನೆಗೆ ಪರವಾದ ಅಥವಾ ವಿರುದ್ಧ ನಿಲುವು ತೆಗೆದುಕೊಳ್ಳುವುದು ರಾಜ್ಯ ಸರಕಾರಕ್ಕೆ ಬಿಟ್ಟದ್ದು. ಆದರೆ ಕೇಂದ್ರ ಸರಕಾರ ರಾಜ್ಯದ ಒಪ್ಪಿಗೆ ಕೇಳುವುದು ಕೇವಲ ಔಪಚಾರಿಕ ಮಾತ್ರ. ನಮಗೆ ಕಾಂಗ್ರೆಸ್ ಹೈಕಮಾಂಡ್ ನಾಯಕತ್ವದ ಬಗ್ಗೆ ಭರವಸೆಯಿದೆ ಎಂದು ಟಿಆರ್ಎಸ್ ತಿಳಿಸಿದೆ.

ಕೆ. ಚಂದ್ರಶೇಖರ ರಾವ್ ಚೇತರಿಸಿಕಂಡ ಬಳಿಕ ತೆಲಂಗಾಣ ಪ್ರಾಂತ್ಯದ ಎಲ್ಲಾ ಜಿಲ್ಲೆಗಳಲ್ಲಿ ಟಿಆರ್ಎಸ್ 'ವಿಜಯ ಯಾತ್ರೆ'ಗಳನ್ನು ಆಯೋಜಿಸಲಿದೆ ಎಂದು ಮತ್ತೊಬ್ಬ ಹಿರಿಯ ಮುಖಂಡ ಹೇಳಿದ್ದಾರೆ.

ಅಲ್ಲದೆ ಚಂದ್ರಶೇಖರ್ ರಾವ್ ಅವರು ನವದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಮತ್ತು ಇತರರನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ