ಪೊಲೀಸ್ ಕೆಲಸಕ್ಕೆ ಸೇರುವ ಮಹಿಳೆಯರಿಗೆ ಸಾಧಾರಣ ಹುದ್ದೆಗಳನ್ನು ನೀಡುತ್ತಿರುವುದರಿಂದ ಮಹಿಳೆಯರ ಸಂಖ್ಯೆ ಇಲಾಖೆಯಲ್ಲಿ ತೀರಾ ಕಡಿಮೆಯಿದೆ ಎಂದು ಅಭಿಪ್ರಾಯಪಟ್ಟಿರುವ ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಹೆಚ್ಚಿನ ಸ್ತ್ರೀಯರು ಸೇರ್ಪಡೆಯಾಗಬೇಕು ಎಂದು ಕರೆ ನೀಡಿದ್ದಾರೆ.
ಇಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳ ಅಗತ್ಯವಿದೆ. ದುರದೃಷ್ಟಕರ ವಿಚಾರವೆಂದರೆ ಇಲಾಖೆಯಲ್ಲಿ ಮಹಿಳೆಯರನ್ನು ತೀರಾ ಕೆಳ ಹಂತದ ಅಧಿಕಾರಿಗಳನ್ನಾಗಿ ನೇಮಿಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಕಡಿಮೆ ಮಹಿಳೆಯರನ್ನು ಕಾಣಲು ಇದೂ ಒಂದು ಪ್ರಮುಖ ಕಾರಣ ಎಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಬೇಡಿ ತಿಳಿಸಿದರು.
ಪೊಲೀಸ್ ಪಡೆಯಲ್ಲಿ ಸ್ತ್ರೀಯರಿಗೆ ಮೀಸಲಾತಿ ನೀಡಿ ಎಂದು ನಾವು ಕೇಳುತ್ತಿಲ್ಲ. ಆದರೆ ಅರ್ಹರನ್ನು ಆಯ್ಕೆ ಮಾಡಿದ ಮೇಲೆ ಅವರಿಗೆ ಸಲ್ಲಬೇಕಾದ ಸ್ಥಾನವನ್ನು, ಅಧಿಕಾರವನ್ನು ನೀಡಬೇಕು ಎಂದು ಇಲಾಖೆಯನ್ನು ಅವರು ಆಗ್ರಹಿಸಿದರು.
ಪೊಲೀಸ್ ಪಡೆಯಲ್ಲಿ ಮಹಿಳೆಯರಿಗೆ ಉನ್ನತ ಪದವಿಗಳನ್ನು ನೀಡುವ ಅಗತ್ಯವನ್ನು ವಿಶ್ವದ ಬೃಹತ್ ಜೈಲುಗಳಲ್ಲೊಂದಾದ ತಿಹಾರ್ ಬಂಧೀಖಾನೆಯಲ್ಲಿ ಖೈದಿಗಳ ಪ್ರಧಾನ ಇನ್ಸ್‌ಪೆಕ್ಟರ್ ಆಗಿದ್ದ ಬೇಡಿ ಪುನರುಚ್ಛರಿಸಿದ್ದಾರೆ.
ಪುರುಷ ಮತ್ತು ಮಹಿಳೆಯರಿಗೆ ಸಮಾನ ರೀತಿಯ ತರಬೇತಿ ನೀಡಿದರೂ, ಹೆಚ್ಚಿನ ಸಲ ಸ್ತ್ರೀಯರಿಗೆ ನೀಡುವ ಪದವಿಗಳಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತದೆ, ಇದು ನಿಲ್ಲಬೇಕು. ಮಹಿಳೆಯರಿಗೂ ಸಮಾನ ನೀತಿಯನ್ನು ಅಳವಡಿಸಬೇಕು ಎಂದು ಬೇಡಿ ಆಗ್ರಹಿಸಿದರು.