ಈರುಳ್ಳಿ ಸಾಕಷ್ಟಿದ್ರೂ, ಬೆಲೆ ಕಣ್ಣೀರು ತರಿಸುತ್ತಿದೆಯೇಕೆ?
ನವದೆಹಲಿ, ಸೋಮವಾರ, 14 ಡಿಸೆಂಬರ್ 2009( 13:49 IST )
PTI
ದೇಶದ ಎಲ್ಲ ಮಂಡಿಗಳಲ್ಲಿ ಸಾಕಷ್ಟು ಈರುಳ್ಳಿ ಸಂಗ್ರಹವಿದೆ ಮತ್ತು ಉತ್ಪಾದನೆಯು ಕೂಡ ಕಡಿಮೆಯೇನೂ ಆಗಿಲ್ಲ. ಆದರೂ, ಅದರ ಬೆಲೆ ಕೇಳಿಯೇ ಜನರ ಕಣ್ಣಲ್ಲಿ ನೀರು ಬರುತ್ತಿದೆಯೇಕೆ? ರಾಜ್ಯವೂ ಸೇರಿದಂತೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 30ರಿಂದ 40 ರೂ.ವರೆಗೆ ಇದೆ.
ಇದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ಉತ್ತರಿಸಿದ್ದಾರೆ: "ಎಲ್ಲದಕ್ಕೂ ಊಹಾಪೋಹಗಳೇ ಕಾರಣವಿರಬಹುದು".
ಮುಂಗಾರು ವಿಳಂಬವಾದ ಮತ್ತು ಆ ಬಳಿಕ ಕಂಡುಬಂದ ಅತಿವೃಷ್ಟಿ ಹಿನ್ನೆಲೆಯಲ್ಲಿ ಈರುಳ್ಳಿ ಉತ್ಪಾದನೆ ಕುಸಿತ ಕಂಡಿದೆ ಎಂಬ ವದಂತಿಯಿಂದಾಗಿ ಕೃಷಿ ಉತ್ಪಾದನೆಯೇ ಕುಸಿದಿದೆ ಎಂಬ ಭಾವನೆ ಬಂದಿದೆ. ಮಹಾರಾಷ್ಟ್ರದಲ್ಲಿ ಈರುಳ್ಳಿಯ ಬಿತ್ತನೆಯೂ ವಿಳಂಬವಾಗಿತ್ತು ಎಂದು ಲೋಕಸಭೆಯಲ್ಲಿ ಬಿಜೆಪಿಯ ಮುರಳಿ ಮನೋಹರ ಜೋಷಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ಶರ್ಮಾ ನುಡಿದರು.
ಈರುಳ್ಳಿ ಉತ್ಪಾದನೆ ಕುಸಿದಿಲ್ಲ. ಸಂಗ್ರಹ ಪ್ರಮಾಣದಲ್ಲಿಯೂ ಕುಸಿತವಿಲ್ಲ. ನಮ್ಮಲ್ಲಿ ಸಾಕಷ್ಟು ಈರುಳ್ಳಿ ಇದೆ ಎಂದ ಸಚಿವರು, ಹಣದುಬ್ಬರಕ್ಕೆ ಈರುಳ್ಳಿಯ ರಫ್ತು ಕಾರಣವೆಂಬ ಆರೋಪಗಳನ್ನು ತಳ್ಳಿ ಹಾಕಿದರು. ಸರಕಾರವು ಕಳೆದ ಡಿಸೆಂಬರ್ ತಿಂಗಳಲ್ಲೇ ಈರುಳ್ಳಿಯ ವಿದೇಶೀ ಮಾರಾಟದ ಮೂಲ ಬೆಲೆಯನ್ನು ಕಿಲೋಗೆ 450 ಡಾಲರ್ ನಿಗದಿಪಡಿಸಿದೆ. ಸ್ಥಳೀಯವಾಗಿ ಈರುಳ್ಳಿ ಪೂರೈಕೆ ಹೆಚ್ಚಿಸಲು ಮತ್ತು ವ್ಯಾಪಾರಿಗಳು ಅಗ್ಗದ ಈರುಳ್ಳಿಯನ್ನು ರಫ್ತು ಮಾಡದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು ಎಂದರು.
ಈ ಉತ್ತರದಿಂದ ತೃಪ್ತರಾಗದ ಜೋಷಿ, ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದರು. ಹಾಗಿದ್ದರೆ ಕೃಷಿ ಸಚಿವಾಲಯ ಅಥವಾ ಗ್ರಾಹಕ ವ್ಯವಹಾರಗಳ ಸಚಿವಾಲಯವನ್ನು ಕೇಳಿ ಎಂದು ಶರ್ಮಾ ಉತ್ತರಿಸಿಬಿಟ್ಟರು.
ಅಲ್ಲಿಗೆ, ಬೆಲೆ ಏರಿಕೆಯ ಗಂಭೀರ ವಿಷಯವೊಂದು ಸದನದ ಮೂಲೆಗೆ ಹೋಗಿ ಬಿತ್ತು.