ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿನಕರನ್ ಪದಚ್ಯುತಿಗೆ 75 ರಾಜ್ಯಸಭಾ ಸದಸ್ಯರಿಂದ ನಿರ್ಣಯ (PD Dinakaran | Rajya Sabha | Karnataka CJ | Hamid Ansari)
Bookmark and Share Feedback Print
 
ಅಕ್ರಮ ಆಸ್ತಿ ಆರೋಪಗಳಿಂದ ನಲುಗುತ್ತಿರುವ ಕರ್ನಾಟಕ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರನ್ನು ಮಹಾಭಿಯೋಗಕ್ಕೆ ಗುರಿಪಡಿಸುವ ನಿರ್ಣಯವೊಂದಕ್ಕೆ ರಾಜ್ಯಸಭೆಯ 75 ಕಾಂಗ್ರೆಸ್ಸೇತರ ಸಂಸದರು ಸಹಿ ಮಾಡಿದ್ದು, ಮನವಿಯನ್ನು ಸಭಾಧ್ಯಕ್ಷ ಹಮೀದ್ ಅನ್ಸಾರಿಯವರಿಗೆ ಸಲ್ಲಿಸಿದ್ದಾರೆ.

1968ರ ನ್ಯಾಯಾಧೀಶರ ವಿಚಾರಣೆ ಕಾಯ್ದೆಯ ಪ್ರಕಾರ ನ್ಯಾಯಾಧೀಶ ಪಿ.ಡಿ. ದಿನಕರನ್ ಅವರನ್ನು ಪದಚ್ಯುತಗೊಳಿಸಲು 75 ರಾಜ್ಯಸಭಾ ಸದಸ್ಯರು ಸಹಿ ಮಾಡಿರುವ ಅರ್ಜಿಯನ್ನು ಇಂದು (ಸೋಮವಾರ) ರಾಜ್ಯಸಭಾಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾನೂನು ಪ್ರಕಾರ ಅರ್ಜಿಯನ್ನು ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅರ್ಜಿಯನ್ನು ಸ್ವೀಕರಿಸಿದ ನಂತರ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿ ಆರೋಪವನ್ನು ತನಿಖೆ ಮಾಡಲಾಗುತ್ತದೆ ಎಂದು ಬಲ್ಲ ಮೂಲಗಳು ವಿವರಣೆ ನೀಡಿವೆ.

ಮಹಾಭಿಯೋಗ ನಿರ್ಣಯಕ್ಕೆ ಕಾನೂನಿನ ಪ್ರಕಾರ ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಅಥವಾ ಲೋಕಸಭೆಯ 100 ಸಂಸದರು ಸಹಿ ಹಾಕಿ ಪ್ರಸ್ತಾಪ ಮಂಡಿಸಬೇಕಾದ ಅಗತ್ಯವಿದೆ. ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಇದನ್ನು ರಾಜ್ಯಸಭಾಧ್ಯಕ್ಷ ಅಥವಾ ಲೋಕಸಭಾ ಸ್ಪೀಕರ್‌ಗೆ ಇದನ್ನು ಸಲ್ಲಿಸಬೇಕಾಗುತ್ತದೆ.

ಈ ರೀತಿ ಸಹಿ ಹಾಕಿದ ಮನವಿಯನ್ನು ರಾಜ್ಯಸಭಾಧ್ಯಕ್ಷರು ಸ್ವೀಕರಿಸಿದ ಬಳಿಕ, ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಒಬ್ಬ ಕಾನೂನು ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿ ಆರೋಪದ ತನಿಖೆ ನಡೆಸುವಂತೆ ಸೂಚಿಸುತ್ತಾರೆ. ಸಮಿತಿಯು ತನಿಖಾ ವರದಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕು.

ಈ ವರದಿಯಲ್ಲಿ ನ್ಯಾಯಾಧೀಶ ಆರೋಪಿಯೆಂದು ಕಂಡು ಬಂದಲ್ಲಿ, ಅವರನ್ನು ಪದಚ್ಯುತಗೊಳಿಸುವ ನಿರ್ಧಾರವನ್ನು ಸಂಸತ್ತಿಗೆ ಬಿಡಲಾಗುತ್ತದೆ. ಇದಕ್ಕೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ದೊರೆಯಬೇಕು. ಬಳಿಕ ರಾಷ್ಟ್ರಪತಿಗಳ ಅಂಕಿತವೇ ಅಂತಿಮವಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ