ತಾಲಿಬಾನ್ ತರಬೇತಿ ಪಡೆದಿರುವ ಭಯೋತ್ಪಾದಕರು ದೇಶದೊಳಗೆ ನುಗ್ಗಿದ್ದಾರೆ ಎಂದು ಶಂಕಿಸಲಾಗಿದ್ದು, ಮುಂಬೈ, ಕೊಲ್ಕತ್ತಾ, ದೆಹಲಿ ಮತ್ತು ಗುಜರಾತ್‌ಗಳಲ್ಲಿ ವಿಧ್ವಂಸಕ ಕೃತ್ಯಗಳನ್ನೆಸಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಗೃಹ ಸಚಿವಾಲಯ ಕಟ್ಟೆಚ್ಚರ ರವಾನಿಸಿದೆ.
ಭಾರತದೊಳಗೆ ಈಗಾಗಲೇ ನುಸುಳಿದ್ದಾರೆ ಎಂದು ಹೇಳಲಾಗಿರುವ ಭಯೋತ್ಪಾದಕರು ತಾಲಿಬಾನ್ ಉಗ್ರ ಸಂಘಟನೆಯಿಂದ ಕಠಿಣ ತರಬೇತಿ ಪಡೆದಿದ್ದಾರೆ. ಅವರು ದೇಶದ ಪ್ರಮುಖ ನಗರಗಳಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಸಾಧ್ಯತೆಗಳಿವೆ. ಹಾಗಾಗಿ ಪ್ರಮುಖ ಸ್ಥಳಗಳಲ್ಲಿ ಗರಿಷ್ಠ ಭದ್ರತೆಯನ್ನು ಒದಗಿಸುವಂತೆ ರಾಜ್ಯಗಳಿಗೆ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.
ಮುಂಬೈ, ಕೊಲ್ಕತ್ತಾ ಮತ್ತು ದೆಹಲಿ ಮೆಟ್ರೋಪಾಲಿಟನ್ ನಗರಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ವಿಮಾನ ನಿಲ್ದಾಣಗಳು, ಮುಂಬೈ ಶೇರು ಮಾರುಕಟ್ಟೆ, ಬಾಬಾ ಅಣು ಸಂಶೋಧನಾ ಕೇಂದ್ರ, ಶಿವಸೇನೆ ಪ್ರಧಾನ ಕಾರ್ಯಾಲಯ ಹಾಗೂ ಕೊಲ್ಕತ್ತಾ ಅಮೆರಿಕನ್ ರಾಯಭಾರಿ ಕಚೇರಿ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲು ಕೇಂದ್ರ ಸೂಚನೆ ನೀಡಿದೆ.
ಉಗ್ರರು ದೇಶದ ಪ್ರಮುಖ ಮೂರು ನಗರಗಳನ್ನು ಗುರಿಯಾಗಿಟ್ಟುಕೊಂಡಿದ್ದಾರೆ ಎಂಬ ಗೃಹ ಸಚಿವಾಲಯದ ಕಟ್ಟೆಚ್ಚರದ ಹಿನ್ನಲೆಯಲ್ಲಿ ಶಂಕಿತ ಫಶ್ತೂನ್ ಮತ್ತು ಅಪಘಾನಿಸ್ತಾನಿಗಳಿಗಾಗಿ ಪೊಲೀಸರು ಹದ್ದಿನ ಕಣ್ಣುಗಳನ್ನು ನೆಟ್ಟಿದ್ದಾರೆ.
ಮುಂಬೈ ಉಗ್ರರ ದಾಳಿ ಶೋಕ ವರ್ಷಾಚರಣೆ ಆಚರಿಸಿದ ಬೆನ್ನಿಗೆ ಭಯೋತ್ಪಾದಕ ದಾಳಿಯ ಮುನ್ನೆಚ್ಚೆರಿಕೆ ಬಂದಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದ್ದು, ದೇಶದ ಪ್ರಮುಖ ನಗರಗಳಿಗೆ ಎಚ್ಚರಿಗೆ ರವಾನಿಸಲಾಗಿದೆ.
ಕಳೆದ ವರ್ಷದ ನವೆಂಬರ್ ಮುಂಬೈ ಉಗ್ರರ ದಾಳಿಯಲ್ಲಿ ಕನಿಷ್ಠ 166 ಮಂದಿ ಸಾವನ್ನಪ್ಪಿದ್ದರು. ಹೊಟೇಲುಗಳು, ರೈಲ್ವೇ ನಿಲ್ದಾಣ, ಆಸ್ಪತ್ರೆ ಸೇರಿದಂತೆ ಹಲವೆಡೆ 10 ಪಾಕಿಸ್ತಾನಿ ಉಗ್ರರು ಸಮುದ್ರದ ಮೂಲಕ ಪ್ರವೇಶಿಸಿ ದಾಳಿ ನಡೆಸಿದ್ದರು.