ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಯಿಲ್ಲ: ಕೇಂದ್ರ ಸ್ಪಷ್ಟನೆ
(Andhra Pradesh | Telangana | Central govt | President Rule)
ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಯಿಲ್ಲ: ಕೇಂದ್ರ ಸ್ಪಷ್ಟನೆ
ನವದೆಹಲಿ, ಸೋಮವಾರ, 14 ಡಿಸೆಂಬರ್ 2009( 19:49 IST )
ಆಂಧ್ರಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಸರಕಾರ, ಅದರ ಬಗ್ಗೆ ತಾನು ಯೋಚಿಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ ನಂತರ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಂಡಿರುವ ರಾಜಕೀಯ ಅತಂತ್ರತೆಯಿಂದಾಗಿ 356ನೇ ವಿಧಿಯನ್ವಯ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಸರಕಾರವು ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಕಾನೂನು ಸಚಿವ ಹಾಗೂ ಆಂಧ್ರಪ್ರದೇಶದ ಎಐಸಿಸಿ ಉಸ್ತುವಾರಿ ಎಂ. ವೀರಪ್ಪ ಮೊಯ್ಲಿ, ಇಂತಹ ವರದಿಗಳು ಹಾಸ್ಯಾಸ್ಪದ ಎಂದಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ. ರೋಸಯ್ಯನವರನ್ನು ಅಧಿಕಾರ ತ್ಯಜಿಸುವಂತೆ ಸೂಚಿಸಲಾಗಿದೆಯೇ ಎಂದಿದ್ದಕ್ಕೆ, ಅದು ಸತ್ಯವಲ್ಲ ಎಂದರು.
ಆಂಧ್ರಪ್ರದೇಶದಲ್ಲಿನ ಪ್ರಸಕ್ತ ಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು ಎಂಬ ಬೇಡಿಕೆಗಳು ಬಂದ ಹಿನ್ನಲೆಯಲ್ಲಿ ಕಾನೂನು ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನಾವು ಜನರ ಸಮಸ್ಯೆಗಳನ್ನು ಅರಗಿಸಿಕೊಳ್ಳುತ್ತೇವೆ. ಪ್ರತಿಯೊಬ್ಬರ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಯಾರು ಕೂಡ ಭೀತಿಗೊಳಗಾಗುವ ಅಗತ್ಯವಿಲ್ಲ, ಆ ರೀತಿ ವರ್ತಿಸುವುದೂ ಅನಗತ್ಯ. ಎಲ್ಲದಕ್ಕೂ ಪರಿಹಾರವಿದೆ ಎಂದು ಮೊಯ್ಲಿ ವಿವರಣೆ ನೀಡಿದ್ದಾರೆ.
ತೆಲಂಗಾಣ ರಾಜ್ಯ ರಚಿಸಲಾಗುತ್ತದೆಯೇ ಎಂಬ ಪ್ರಶ್ನೆಗವರು, ಇದಕ್ಕೆ ನಾನೇನೂ ಉತ್ತರಿಸಲಾರೆ ಎಂದು ಹೇಳುವ ಮೂಲಕ ಯಾವುದೇ ವಿವಾದಕ್ಕೊಳಗಾಗುವ ಸಾಧ್ಯತೆಯಿಂದ ದೂರವೇ ಉಳಿದುಕೊಂಡರು.