ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ 'ರಾಜ್ಯ'ಕೀಯ; ಇಕ್ಕಳದಲ್ಲಿ ಸಿಲುಕಿದೆ ಕಾಂಗ್ರೆಸ್ (Telangana | Andhra Pradesh | Congress | Sonia Gandhi)
Bookmark and Share Feedback Print
 
ಆಂಧ್ರಪ್ರದೇಶ ಕಾಂಗ್ರೆಸ್ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ತೆಲಂಗಾಣೇತರ ಪ್ರಾಂತ್ಯಗಳ ಶಾಸಕರು ರಾಜಿನಾಮೆ ನೀಡಿದ ಬಳಿಕ ಆ ಪ್ರದೇಶದ ಎಲ್ಲಾ ಸಂಸದರು ಕೂಡ ರಾಜಿನಾಮೆ ನೀಡಬೇಕೆಂದು ಒತ್ತಡ ಹೇರಲು ನಿರ್ಧರಿಸಿದ್ದಾರೆ.

ತೆಲಂಗಾಣ ಪ್ರತ್ಯೇಕ ರಾಜ್ಯವನ್ನು ವಿರೋಧಿಸಿ ನಡೆಯುತ್ತಿರುವ ಬಂದ್, ಹಿಂಸಾಚಾರ, ಚಳುವಳಿಗಳು ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಇತ್ತ ಕೆಲ ಶಾಸಕರು, ಸಂಸದರು ಉಪವಾಸ ಸತ್ಯಾಗ್ರಹದ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಒತ್ತಡದ ಹೊರತಾಗಿಯೂ ರಾಜಿನಾಮೆಗಳನ್ನು ವಾಪಸ್ ಪಡೆಯಲು ನಿರಾಕರಿಸಿರುವ ಶಾಸಕರು, ಸಂಸದರು ಸಡ್ಡು ಹೊಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಇದೊಂದು ರೀತಿಯಲ್ಲಿ ಆಂಧ್ರ ಕಾಂಗ್ರೆಸ್‌ನ ಹಿಡಿತ ಹೈಕಮಾಂಡ್ ಕೈ ತಪ್ಪಿ ಹೋಗುತ್ತಿದೆಯೋ ಎಂಬ ಭಾವನೆಯೂ ಮೂಡುತ್ತಿದೆ.

ನಿನ್ನೆ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗುತ್ತಿದ್ದಂತೆ ಶಾಸಕರ ಗದ್ದಲದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಅದಕ್ಕೂ ಮೊದಲು ಆಮರಣಾಂತ ಉಪವಾಸಕ್ಕೆ ತೆರಳುತ್ತಿದ್ದ ವಿಜಯವಾಡ ಸಂಸದ ಎಲ್. ರಾಜಗೋಪಾಲ್ ಅವರನ್ನು ಬಂಧಿಸಿದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು.

ಈ ನಿಟ್ಟಿನಲ್ಲಿ ಉದ್ನಿಗ್ನತೆಯನ್ನು ಕಡಿಮೆ ಮಾಡುವ ಯತ್ನದಲ್ಲಿರುವ ಕೇಂದ್ರ, ಪ್ರತಿಯೊಬ್ಬರ ಅಭಿಪ್ರಾಯಗಳಿಗೂ ಮನ್ನಣೆ ನೀಡಲಾಗುತ್ತದೆ ಎಂದು ತೇಪೆ ಹಚ್ಚಲು ಯತ್ನಿಸಿದೆ. ತೆಲಂಗಾಣ ವಿಚಾರದಲ್ಲಿ ರಾಜ್ಯ ವಿಧಾನಸಭೆಯ ನಿರ್ಣಯವಿಲ್ಲದೆ ಕೇಂದ್ರ ನೇರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಅತ್ತ ಮತ್ತೊಂದು ಕಡೆ ತೆಲಂಗಾಣ ಪ್ರಾಂತ್ಯದ ರಾಜ್ಯ ಮತ್ತು ಕೇಂದ್ರ ಸಚಿವರು, ಸಂಸದರು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ನಡುವೆ ರಾಯಲಸೀಮಾ ಮತ್ತು ಆಂಧ್ರ ಕರಾವಳಿಯ ಶಾಸಕರು ರಾಜಗೋಪಾಲ್ ನೇತೃತ್ವದಲ್ಲಿ ಹಿರಿಯ ನಾಯಕ ಜೆ.ಸಿ. ದಿವಾಕರ ರೆಡ್ಡಿಯವರನ್ನು ಭೇಟಿಯಾಗಿದ್ದು, ನವದೆಹಲಿಯ ಮೇಲೆ ಒತ್ತಡ ಹೇರಲು ಈ ಪ್ರಾಂತ್ಯದ ಎಲ್ಲಾ ಸಂಸದರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ನಮ್ಮ ಪ್ರಾಂತ್ಯದ ಎಲ್ಲಾ ಶಾಸಕ, ಸಂಸದರು ರಾಜಿನಾಮೆ ನೀಡುವ ಮೂಲಕ, ಅಖಂಡ ರಾಜ್ಯದ ಪರ, ತೆಲಂಗಾಣ ವಿರೋಧಿ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ