ಬಿಜೆಪಿಯವರಿಗೆ ಮುಸ್ಲಿಮರ ಮೇಲೇಕೆ ಪ್ರೀತಿಯಿಲ್ಲ: ಕಾಂಗ್ರೆಸ್ ಪ್ರಶ್ನೆ
ನವದೆಹಲಿ, ಮಂಗಳವಾರ, 15 ಡಿಸೆಂಬರ್ 2009( 12:22 IST )
ಬಿಜೆಪಿಯು ಸಿಖ್ಖರ ಕಡೆ ತೋರಿಸುವ ನಿಷ್ಠೆಯನ್ನು ಮುಸ್ಲಿಮ್ ಸಮುದಾಯದತ್ತ ತೋರಿಸದೇ ಇರುವುದು ತೀವ್ರ ಕಳವಳಕಾರಿ ವಿಚಾರ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಖ್ ಸಮುದಾಯದೊಂದಿಗೆ ತಾನು ಬಾಂಧವ್ಯ ಹೊಂದಿದ್ದೇನೆ ಎಂಬುದನ್ನು ಬಿಜೆಪಿ ತೋರಿಸುತ್ತಿದೆ. ಆದರೆ ಇದೇ ನೀತಿಯನ್ನು ಅದು ಮುಸ್ಲಿಮ್ ಸಮುದಾಯದ ವಿಚಾರ ಬಂದಾಗ ಅನುಸರಿಸುವುದಿಲ್ಲ. ನನಗಿದು ಗಂಭೀರ ಕಳವಳಕಾರಿ ಸಂಗತಿಯಾಗಿ ಗೋಚರಿಸುತ್ತಿದೆ ಎಂದು ಸಂಸತ್ತಿನ ಹೊರಗೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.
1984ರ ಸಿಖ್ ವಿರೋಧಿ ಗಲಭೆಯ ತಪ್ಪಿತಸ್ಥರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಪರಿಹಾರ ವಿತರಿಸಲಾಗಿದೆಯೇ ಎಂಬ ಕುರಿತು ರಾಜ್ಯಸಭೆಯಲ್ಲಿ ಪ್ರಶ್ನೆಗಳು ಬಂದ ನಂತರ ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಈ ಸಂಬಂಧ ಬಿಜೆಪಿ ಸದಸ್ಯ ವಿನಯ್ ಕಟಿಯಾರ್ ಮತ್ತು ಗೃಹಸಚಿವರ ನಡುವೆ ವಾಗ್ವಾದಗಳು ನಡೆದಿದ್ದವು.
ನನ್ನ ಮಾತಿನಿಂದಾಗಿ ಅವರಿಗೆ ಹೊಟ್ಟೆ ತೊಳೆಸಿದಂತಾಗಿರಬಹುದು. ಅವರು ನಾನಾವತಿ ಆಯೋಗದ ವರದಿಯ ಬಗ್ಗೆ ಒಕ್ಕೊರಲಿನಿಂದ ಚರ್ಚೆಗೆ ದೌಡಾಯಿಸುತ್ತಾರೆ; ಆದರೆ ಲಿಬರ್ಹಾನ್ ಆಯೋಗದಂತಹ ಯಾವುದೇ ವರದಿಯನ್ನು ಹತ್ತಿರ ಬರಲೂ ಬಿಡುವುದಿಲ್ಲ. ಇದನ್ನೇ ನಾನು ಅವರಿಗೆ ಎತ್ತಿ ತೋರಿಸಿದೆ ಎಂದು ಚಿದಂಬರಂ ವಿವರಣೆ ನೀಡಿದರು.
ಲಿಹರ್ಹಾನ್ ಆಯೋಗದ ವರದಿಯ ಕುರಿತು ಹೇಳಿಕೆ ನೀಡಲು ಮುಂದಾದಾಗ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬಿಜೆಪಿ ಸದಸ್ಯರು ಭಾರೀ ಗದ್ದಲವನ್ನೆಬ್ಬಿಸುವ ಮೂಲಕ ನನ್ನನ್ನು ಮುಂದುವರಿಯಲು ಬಿಟ್ಟಿರಲಿಲ್ಲ ಎಂದರು.
ಎಲ್ಲಾ ಸಮುದಾಯಗಳೊಂದಿಗೂ ಅತ್ಯುತ್ತಮ ಬಾಂಧವ್ಯ ಇಟ್ಟುಕೊಳ್ಳುವುದು ಅಗತ್ಯವಾಗಿದ್ದು, ಯಾವ ಸಮುದಾದ ತೊಂದರೆಯಲ್ಲಿದೆಯೋ ಅವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಲ್ಲಿ ಯಾವುದೇ ನಿಷ್ಕ್ರಿಯತೆ ಕಂಡು ಬಂದಲ್ಲಿ ಅದಕ್ಕೆ ನಾವೆಲ್ಲರೂ ಸಮಾನವಾಗಿ ಕಾರಣರು ಎಂದು ಚಿದಂಬರಂ ಅಭಿಪ್ರಾಯಪಟ್ಟರು.