ಆಂಧ್ರಪ್ರದೇಶ ವಿಭಜನೆ ನಿರ್ಧಾರದ ವಿರುದ್ಧ ಆಕ್ರೋಶಗೊಂಡಿರುವ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಉಸ್ತುವಾರಿ-ಕಾನೂನು ಸಚಿವ ವೀರಪ್ಪ ಮೊಯ್ಲಿ, ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಪಿಂಡಪ್ರದಾನ ಸಮಾರಂಭ ನಡೆಸಿದ್ದಾರೆ. ಮತ್ತೊಂದೆಡೆ ವಿಜಯವಾಡ ಸಂಸದ ಎಲ್. ರಾಜಗೋಪಾಲ್ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ಕಲ್ಪಿಸುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡಿರುವ ಟಿಡಿಪಿ, ಆಂಧ್ರಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಮೊಯ್ಲಿ ಸೇರಿದಂತೆ ಚಿದಂಬರಂ ಮತ್ತು ಪಿಳ್ಳೈ ಅವರಿಗೆ ಶಾಸ್ತ್ರೋಕ್ತವಾಗಿ ಪಿಂಡಪ್ರದಾನ ನಡೆಸಿ ತಿಥಿ ಊಟವನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ತನ್ನ ಅಸಮಾಧಾನವನ್ನು ಹೊರ ಹಾಕಿದೆ.
ಕೇಂದ್ರದ ನಿರ್ಧಾರದ ಕುರಿತು ಟಿಡಿಪಿ ಅಲ್ಲಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿ ಸಂಘಟನೆಗಳೂ ಭಾರೀ ಸಂಖ್ಯೆಯಲ್ಲಿ ಚಳುವಳಿಗಳನ್ನು ಮುಂದುವರಿಸಿವೆ. ಕೆಲವೆಡೆ ಪ್ರತಿಭಟನಾಕಾರರಿಂದ ಹಿಂಸಾಚಾರಗಳು ನಡೆದ ಬಗ್ಗೆಯೂ ವರದಿಗಳು ಬಂದಿವೆ.
ರಾಜಗೋಪಾಲ್ ಉಪವಾಸ... ಆಮರಣ ಉಪವಾಸ ಸತ್ಯಾಗ್ರಹ ಬೆದರಿಕೆ ಹಾಕಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಸಂಸದ ಎಲ್. ರಾಜಗೋಪಾಲ್ ಮಂಗಳವಾರ ತನ್ನ ಉಪವಾಸವನ್ನು ವಿಜಯವಾಡದಲ್ಲಿ ಆರಂಭಿಸಿದ್ದಾರೆ.
ನಾನು ಹೈದರಾಬಾದ್‌ನಲ್ಲಿ ನಿನ್ನೆಯೇ ಉಪವಾಸ ಆರಂಭಿಸಬೇಕೆಂದುಕೊಂಡಿದ್ದೆ. ಆದರೆ ಹಾಗೆ ಮಾಡಲು ಅವಕಾಶ ನೀಡಲಿಲ್ಲ. ಇಲ್ಲಿ ನನ್ನ ಉಪವಾಸವನ್ನು ಮುಂದುವರಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಆಂಧ್ರಪ್ರದೇಶ ವಿಭಜನೆ ನಿರ್ಧಾರವನ್ನು ಕೇಂದ್ರ ಸರಕಾರ ಕೈ ಬಿಡದಿದ್ದರೆ, ಇಲ್ಲೇ ಪ್ರಾಣ ತ್ಯಾಗ ಮಾಡಲೂ ತಾನು ಹಿಂದೇಟು ಹಾಕುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯ ಸ್ಥಾನ ಕಲ್ಪಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸಿಗುವುದಿಲ್ಲ ಎಂದೂ ಅವರು ಹೇಳಿದರು.