ಫ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಮಿತವ್ಯಯಕ್ಕೆ ಹೆಚ್ಚು ಒತ್ತು ಕೊಡುವ ಬಗ್ಗೆ ತೋರಿಸುತ್ತಿರುವ ಬದ್ಧತೆಯಲ್ಲೇ ಗೊಂದಲಗಳು ಕಾಣಿಸಿಕೊಂಡಿದ್ದು, ವಿಐಪಿಗಳು ಬಳಸುವ 12 ಹೆಲಿಕಾಫ್ಟರುಗಳನ್ನು ದುಬಾರಿ ಬೆಲೆಗೆ ಖರೀದಿಸುತ್ತಿರುವ ಬಗ್ಗೆ ಎರಡು ಸಚಿವಾಲಯಗಳು ಹಗ್ಗ ಜಗ್ಗಾಟ ನಡೆಸುತ್ತಿವೆ.
3,600 ಕೋಟಿ ರೂಪಾಯಿ ಮೊತ್ತದ ಹೆಲಿಕಾಫ್ಟರುಗಳನ್ನು ಇಟಲಿಯ ವೈಮಾನಿಕ ಸಂಸ್ಥೆ 'ಅಗಸ್ತಾ ವೆಸ್ಟ್‌ಲೆಂಡ್'ನಿಂದ ಖರೀದಿಸಲು ರಕ್ಷಣಾ ಸಚಿವಾಲಯ ಬಹುತೇಕ ಅಂತಿಮ ಮುದ್ರೆಯನ್ನೊತ್ತಿದರೂ, ಹಣಕಾಸು ಸಚಿವಾಲಯ ತನ್ನ ಆಕ್ಷೇಪ ವ್ಯಕ್ತಪಡಿಸಿರುವುದು ಇದೀಗ ಬಹಿರಂಗವಾಗಿದೆ.
ವಿತ್ತ ಸಚಿವಾಲಯದ ಪ್ರಕಾರ ಹೆಲಿಕಾಫ್ಟರ್‌ವೊಂದಕ್ಕೆ 300 ಕೋಟಿ ರೂಪಾಯಿಗಳಂತೆ 12 ಹೆಲಿಕಾಫ್ಟರುಗಳಿಗೆ 3,600 ಕೋಟಿ ರೂಪಾಯಿ ತೀರಾ ದುಬಾರಿಯಾಯಿತು ಎಂದು ತನ್ನ ಅಭಿಪ್ರಾಯವ್ಯಕ್ತಪಡಿಸಿದೆ.
ಅಂದಾಜು ಮೂಲವೆಚ್ಚದ ಪ್ರಕಾರ ಖರೀದಿಗೆ ಕೇವಲ 1,400 ಕೋಟಿ ರೂಪಾಯಿಗಳಿಗಷ್ಟೇ ವಿತ್ತ ಸಚಿವಾಲಯ ಅನುಮತಿ ನೀಡಿತ್ತು.
ಅಲ್ಲದೆ ರಕ್ಷಣಾ ಸಚಿವಾಲಯವು ಕೇವಲ ಒಂದೇ ಕಂಪನಿಯಿಂದ ಅಷ್ಟೂ ಹೆಲಿಕಾಫ್ಟರುಗಳನ್ನು ಖರೀದಿಸುತ್ತಿರುವ ಮರ್ಮವೂ ಹಣಕಾಸು ಸಚಿವಾಲಯಕ್ಕೆ ಅರ್ಥವಾಗಿಲ್ಲ. ಅದರ ಕುರಿತು ಕೂಡ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಅದೇ ಹೊತ್ತಿಗೆ ಕೇಂದ್ರೀಯ ವಿಚಕ್ಷಣಾ ಆಯೋಗ ಮತ್ತು ಪ್ರಧಾನ ಮಂತ್ರಿಗಳ ಕಚೇರಿಗಳಿಗೆ ಪತ್ರ ಬರೆದಿರುವ ದಾಮನ್ ಸಂಸದರೊಬ್ಬರು, ತಾಂತ್ರಿಕ ಮಾನದಂಡಗಳಿಗೆ ಒಪ್ಪಂದದಲ್ಲಿ ಹೆಚ್ಚಿನ ಮಹತ್ವ ಕೊಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ಐದು ತಿಂಗಳುಗಳಿಂದ ಹೆಲಿಕಾಫ್ಟರ್ ಖರೀದಿ ಸಂಬಂಧ ಈ ಎರಡು ಸಚಿವಾಲಯಗಳು ಮಾತುಕತೆ ನಡೆಸುತ್ತಿದ್ದು, ಇನ್ನೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ಮೂಲಗಳ ಪ್ರಕಾರ ರಕ್ಷಣಾ ಸಚಿವಾಲಯ ಖರೀದಿಸಲು ಉದ್ದೇಶಿಸಿರುವ ಹೆಲಿಕಾಫ್ಟರುಗಳ ದರ ಸರಾಸರಿ ಮುಂಚೂಣಿಯಲ್ಲಿರುವ ಯುದ್ಧ ವಿಮಾನಗಳಿಗೆ ಸಮ ಎಂದು ಹೇಳಲಾಗಿದೆ.