ಕಳ್ಳತನ ಮಾಡಿದ ಆರೋಪದ ಮೇಲೆ ಮನಬಂದಂತೆ ಅಪ್ರಾಪ್ತ ಮಕ್ಕಳಿಗೆ ಥಳಿಸಿದ ಪೊಲೀಸರು ಬಳಿಕ ಅವರನ್ನು ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿದ ಭೀಭತ್ಸ ಘಟನೆ ನೋಯ್ಡಾದಿಂದ ವರದಿಯಾಗಿದೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿನ ಉದ್ಯಮಿಯೊಬ್ಬನ ಬ್ಯಾಗ್ ಕಳ್ಳತನ ನಡೆಸಿದ ಆರೋಪದ ಮೇಲೆ ಈ ಮಕ್ಕಳನ್ನು ಕೆಲ ದಿನಗಳ ಹಿಂದೆ ಚಿತ್ರಹಿಂಸೆಗೊಳಪಡಿಸಲಾಗಿತ್ತು. ಬಳಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಭಾರೀ ವಿವಾದ ಸೃಷ್ಟಿಯಾಗಿತ್ತು.
ಈಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಎಚ್ಚೆತ್ತುಕೊಂಡಿದ್ದು, ನೋಯ್ಡಾ ಪೊಲೀಸರಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೆ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದು, ತೀವ್ರ ಕಳವಳ ವ್ಯಕ್ತಪಡಿಸಿದೆ.
ಘಟನೆ ವಿವರ... ಕಾಂಟ್ರಾಕ್ಟರ್ ಒಬ್ಬನ ಕಾರಿನಿಂದ ಬ್ಯಾಗೊಂದನ್ನು ರಾಧಾ ಮಿಶ್ರಾ (9) ಮತ್ತು ಮುನ್ನಾ (12) ಎಂಬಿಬ್ಬರು ಅಪ್ರಾಪ್ತ ಮಕ್ಕಳು ಕದ್ದಿದ್ದಾರೆ ಎಂಬ ಆರೋಪದ ಮೇಲೆ ನೋಯ್ಡಾ ಪೊಲೀಸರು ನವೆಂಬರ್ 14ರಂದು ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ಕಾರಿನ ಮಾಲಕ ಇಬ್ಬರೂ ಮಕ್ಕಳನ್ನು ಕಾರಿನ ಸುತ್ತ ಓಡಿಸುತ್ತಾ ಥಳಿಸಿದ ನಂತರ ಪೊಲೀಸರಿಗೆ ಹಸ್ತಾಂತರಿಸಿದ್ದ. ನೋಯ್ಡಾ ಸೆಕ್ಟರ್ 11ರ ಜುಂದಾಪುರ ಪೊಲೀಸ್ ಠಾಣೆಯ ಪೊಲೀಸರು ಮಕ್ಕಳನ್ನು ವಶಕ್ಕೆ ಪಡೆದು ಮನಬಂದಂತೆ ಹೊಡೆದಿದ್ದರು. ಬಳಿಕ ಅವರ ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದು ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿದ್ದರು.
ಬಳಿಕ ಕಳ್ಳತನವಾಗಿದೆ ಎಂದು ಹೇಳಲಾದ ಕಾಂಟ್ರ್ಯಾಕ್ಟರ್ ಬ್ಯಾಗ್ ಕಾರಿನಲ್ಲೇ ನಂತರ ಪತ್ತೆಯಾಗಿತ್ತು.
ಘಟನೆಯ ಬಗ್ಗೆ ನಾಲ್ಕು ವಾರಗಳೊಳಗೆ ವಾಸ್ತವ ವರದಿಯನ್ನು ನೀಡುವಂತೆ ಗೌತಮಬುದ್ಧ ನಗರ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿದೆ.