ತೆಲಂಗಾಣ ಪ್ರತ್ಯೇಕ ರಾಜ್ಯ ವಿರೋಧಿ ಬಂದ್, ಆಂದೋಲನಗಳು, ಸಂಸದ ಎಲ್. ರಾಜಗೋಪಾಲ್ ಸೇರಿದಂತೆ ಹಲವು ಮುಖಂಡರ ಆಮರಣಾಂತ ಉಪವಾಸಗಳು ಬುಧವಾರವೂ ಆಂಧ್ರಪ್ರದೇಶದ ತೆಲಂಗಾಣೇತರ ಪ್ರಾಂತ್ಯಗಳಲ್ಲಿ ಮುಂದುವರಿದಿದೆ.
ಮತ್ತೊಂದೆಡೆ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ಸೂಚಿಸಿರುವ ತನ್ನ ಶಾಸಕರ ಮನವೊಲಿಸಬೇಕಾದ ಒತ್ತಡಕ್ಕೆ ಸಿಲುಕಿರುವ ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಮೊನ್ನೆಯಷ್ಟೇ ಹೈದರಾಬಾದ್‌ನಲ್ಲಿ ರಾಜಗೋಪಾಲ್ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಇಂದು ಕೂಡ ಮುಂದುವರಿದಿದೆ. ಆಂಧ್ರಪ್ರದೇಶವನ್ನು ವಿಭಜಿಸುವುದಿಲ್ಲ ಎಂಬ ಭರವಸೆ ಕೇಂದ್ರದಿಂದ ಬರದ ಹೊರತು ಉಪವಾಸದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಖಂಡ ಆಂಧ್ರಪ್ರದೇಶಕ್ಕೆ ಭಾರೀ ಬೆಂಬಲವಿದ್ದು, ಇದರ ಅರಿವನ್ನು ಮೂಡಿಸಲಾಗುತ್ತಿದೆ. ಅಖಂಡ ಕಲ್ಪನೆಯ ಪೂರಕ ಪರಿಣಾಮಗಳನ್ನು ನಾವು ಮತ್ತಷ್ಟು ಪ್ರಚಾರ ಮಾಡಬೇಕಾದ ಅಗತ್ಯವಿದೆ. ವಿಭಜನೆ ಪ್ರಕ್ರಿಯೆ ಅಂತ್ಯ ಕಾಣುವವರೆಗೂ ನನ್ನ ಉಪವಾಸ ಮುಂದುವರಿಯಲಿದೆ. ಬಳಿಕ ನಾವು ತೆಲುಗು ಭಾಷಿಗರ ಒಗ್ಗೂಡುವಿಕೆಯ ಆಂದೋಲನ ನಡೆಸಲಿದ್ದೇವೆ ಎಂದು ರಾಜಗೋಪಾಲ್ ತಿಳಿಸಿದ್ದಾರೆ.
ಈ ನಡುವೆ ಟಿಡಿಪಿ ಶಾಸಕರಾದ ಡಿ. ಉಮಾಮಹೇಶ್ವರ ರಾವ್, ಚಿ. ರಾಮಕೋಟಯ್ಯ ಮತ್ತು ಇತರ ನಾಯಕರ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪೊಲೀಸರು ಒತ್ತಾಯಪೂರ್ವಕವಾಗಿ ರಾಮಕೋಟಯ್ಯ ಮತ್ತು ವಿಜಯವಾಡ ಮಾಜಿ ಮೇಯರ್ ಪಿ. ಅನುರಾಧ ಅವರನ್ನು ಕಳೆದ ರಾತ್ರಿ ಇಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಸಹೋದರ ವಿಧಾನ ಪರಿಷತ್ ಸದಸ್ಯ ವೈ.ಎಸ್. ವಿವೇಕಾನಂದ ರೆಡ್ಡಿಯವರು ತನ್ನ ಉಪವಾಸ ಸತ್ಯಾಗ್ರಹವನ್ನು ಹೈದರಾಬಾದ್‌ನಿಂದ ಕಡಪಕ್ಕೆ ವರ್ಗಾಯಿಸಿದ್ದಾರೆ. ಅವರು ಕೂಡ ಆಂಧ್ರ ವಿಭಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಇಕ್ಕಟ್ಟಿನಲ್ಲಿ ಚಿರಂಜೀವಿ.... ಇವೆಲ್ಲದರ ನಡುವೆ ಚಿತ್ರನಟ ಚಿರಂಜೀವಿಯವರ ಪ್ರಜಾರಾಜ್ಯ ಪಕ್ಷವೂ ಆಂತರಿಕ ಭಿನ್ನಾಭಿಪ್ರಾಯ ಸಮಸ್ಯೆಯನ್ನು ಎದುರಿಸುತ್ತಿದ್ದು, ನಾಯಕನ ಅಣಿಮುತ್ತಿಗಾಗಿ ಕಾರ್ಯಕರ್ತರು ಕಾಯುತ್ತಿದ್ದಾರೆ.
ತೆಲಂಗಾಣ ಪರ ಹೋರಾಟ ನಡೆಸುತ್ತಿರುವ ಚಿರಂಜೀವಿಯವರು ತಕ್ಷಣವೇ ತನ್ನ ಹೋರಾಟದಿಂದ ಹಿಂದಕ್ಕೆ ಸರಿದು, ಅಖಂಡ ಆಂಧ್ರಪ್ರದೇಶಕ್ಕಾಗಿ ಯತ್ನಿಸಬೇಕು ಎಂದು ಪಿಆರ್‌ಪಿ ಶಾಸಕ ಜಿ. ಶ್ರೀನಿವಾಸ ರಾವ್ ಅವರು ಬೇಡಿಕೆಯಿಟ್ಟಿದ್ದಾರೆ.
ಈ ಸಂಬಂಧ ಮಂಗಳವಾರ ಪಕ್ಷದ ನಾಯಕರು ಮತ್ತು ಶಾಸಕರ ಜತೆ ಚಿರಂಜೀವಿ ಸತತ ಸಮಾಲೋಚನೆ ನಡೆಸಿದ್ದಾರೆ. ಆಂಧ್ರ ಕರಾವಳಿ ಮತ್ತು ರಾಯಲಸೀಮೆ ಪ್ರಾಂತ್ಯದ ನಾಯಕರೊಂದಿಗೆ ಇಂದು ಮಾತುಕತೆ ನಡೆಸುತ್ತಿದ್ದು, ಪಕ್ಷದ ನಿಲುವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರೆ ಎಂದು ಹೇಳಲಾಗಿದೆ.
ಪ್ರಜಾರಾಜ್ಯಂ ಪಕ್ಷದ 18 ಶಾಸಕರ ಪೈಕಿ 15 ಮಂದಿ ತೆಲಂಗಾಣೇತರ ಪ್ರಾಂತ್ಯದವರು.