ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟಿದ್ದ ಸಂಸದ ಜಸ್ವಂತ್ ಸಿಂಗ್ ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷರಾಗಿದ್ದ ಜಸ್ವಂತ್, ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಕೆಲ ಸಮಯದ ಹಿಂದೆ ಬಿಜೆಪಿ ಸೂಚನೆ ನೀಡಿದ್ದರೂ, ಅದಕ್ಕೆ ಬಿಜೆಪಿಯ ಮಾಜಿ ಮುಖಂಡ ಸೊಪ್ಪು ಹಾಕಿರಲಿಲ್ಲ.
ಆದರೆ ಇದೀಗ ಕಂಡು ಬಂದಿರುವ ಬೆಳವಣಿಗೆಯಲ್ಲಿ ಅವರು ಪಿಎಸಿ ಅಧ್ಯಕ್ಷ ಸ್ಥಾನ ನೀಡಿದ್ದು, ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ರಾಷ್ಟ್ರೀಯ ತೆಲಂಗಾಣ ಸಮಿತಿ ನಾಯಕ ಕೆ. ಚಂದ್ರಶೇಖರ ರಾವ್ ಆಮರಣಾಂತ ಉಪವಾಸಕ್ಕೆ ಕುಗ್ಗಿ ಹೋದ ಕೇಂದ್ರ ಸರಕಾರ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಒಪ್ಪಿಗೆ ಸೂಚಿಸಿದ ಬೆನ್ನಿಗೆ ಗೂರ್ಖಾ ಜನಶಕ್ತಿ ಮೋರ್ಚಾ ಕೂಡ ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಮರು ಚಾಲನೆ ನೀಡಿತ್ತು. ಈ ಸಮಿತಿಗೆ ಬೆಂಬಲ ಸೂಚಿಸಿದ್ದ ಜಸ್ವಂತ್, ಗೂರ್ಖಾಲ್ಯಾಂಡ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದ್ದರು.
ಪಿಎಸಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜಿನಾಮೆ ಹಿಂದೆ ಗೂರ್ಖಾಲ್ಯಾಂಡ್ ಪ್ರಭಾವವಿದೆಯೇ ಎಂಬುದು ತಿಳಿದು ಬಂದಿಲ್ಲ.
ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರನ್ನು ಹೊಗಳಿ ಕೃತಿಯೊಂದನ್ನು ಪ್ರಕಟಿಸಿದ ಹಿನ್ನಲೆಯಲ್ಲಿ ಅವರನ್ನು ಬಿಜೆಪಿ ಸದಸ್ಯತ್ವದಿಂದ ವಜಾಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ಅವರು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಸೇರಿದಂತೆ ಉನ್ನತ ನಾಯಕ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು.