ಅಖಂಡ ಆಂಧ್ರಪ್ರದೇಶಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ, ಆಮರಣಾಂತ ಉಪವಾಸ, ಒತ್ತಡ ತಂತ್ರಗಳು ಮತ್ತೊಂದು ಮಗ್ಗುಲನ್ನು ಪಡೆದುಕೊಂಡಿದ್ದು, ಅಭಿಮಾನಿಗಳಿಂದ ಆತ್ಮಹತ್ಯೆ ಸರಣಿಗಳೂ ಆರಂಭವಾಗಿವೆ.
ಅಖಂಡ ಆಂಧ್ರಪ್ರದೇಶಕ್ಕಾಗಿನ ಹೋರಾಟಕ್ಕೀಗ ಇಬ್ಬರು ಯುವಕರು ತಮ್ಮ ಪ್ರಾಣಗಳನ್ನು ಅರ್ಪಿಸಿದ ಬಗ್ಗೆ ವರದಿಗಳು ಬಂದಿವೆ. ಅಲ್ಲದೆ ಹಲವು ಕಡೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸುತ್ತಿರುವ ಘಟನೆಗಳೂ ನಡೆಯುತ್ತಿವೆ.
ಗಂಟೂರಿನ ಬಸವತಾರಕ ನಗರದ 30ರ ಹರೆಯದ ವೇಮುಲಾ ಶ್ರೀನಿವಾಸ್ ಎಂಬ ವ್ಯಕ್ತಿ ವೇಗವಾಗಿ ಸಾಗುತ್ತಿರುವ ರೈಲಿನಿಂದ ಹಾರುತ್ತಾ ಬಲಿದಾನಗೈದಿದ್ದು, ಈ ಸಂದರ್ಭದಲ್ಲಿ ಅಖಂಡ ಆಂಧ್ರಪ್ರದೇಶ ಪರ ಘೋಷಣೆಗಳನ್ನು ಕೂಗುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಚಿರಾಲ ಸಮೀಪದ ಕಾರಂಚೇಡು ಎಂಬಲ್ಲಿನ 25ರ ಹರೆಯದ ದೊಡ್ಡು ಯೋಹಾನ್ ಎಂಬ ಯುವಕ ಬುಧವಾರ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಆತ ರ‌್ಯಾಲಿ, ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ. ಆತ್ಮಹತ್ಯೆಗೂ ಮೊದಲು ಆತ ಮರಣಪತ್ರವನ್ನೂ ಬರೆದಿದ್ದಾನೆ.
ಮತ್ತೊಂದೆಡೆ ಸಮೈಕ್ಯ ಆಂಧ್ರ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಆಂಧ್ರ ವಿಭಜನೆ ಆತನಿಗೆ ತೀವ್ರತರವಾದ ನೋವು ತಂದಿತ್ತು. ಇದೇ ಕಾರಣದಿಂದ ಆತನಿಗೆ ಸಾವು ಬಂದಿದೆ ಎಂದು ಕುಟುಂಬಿಕರು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಆಂಧ್ರ ಯುನಿವರ್ಸಿಟಿ ಕಾಲೇಜಿನ 10 ವಿದ್ಯಾರ್ಥಿಗಳು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಸಂದರ್ಭದಲ್ಲಿ ಅವರು ಆಸ್ಪತ್ರೆಯ ಕಟ್ಟಡದಿಂದ ಕೆಳಕ್ಕೆ ಹಾರುವ ಬೆದರಿಕೆಯನ್ನೊಡ್ಡುವ ಮೂಲಕ ಕೆಲಕಾಲ ಆತಂಕದ ಪರಿಸ್ಥಿತಿ ಮೂಡಿಸಿದ್ದರು. ತೆಲಂಗಾಣ ಪ್ರತ್ಯೇಕ ರಾಜ್ಯ ನಿರ್ಧಾರವನ್ನು ಕೈ ಬಿಡುವುದಾಗಿ ಕೇಂದ್ರ ಸರಕಾರ ಪ್ರಕಟಿಸಬೇಕು, ಇಲ್ಲದೇ ಇದ್ದರೆ ಕೆಳಕ್ಕೆ ಹಾರಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಬೆದರಿಕೆ ಹಾಕಿದ್ದರು.
ನಂತರ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಸಫಲರಾಗಿದ್ದಾರೆ ಎಂದು ವರದಿಗಳು ಹೇಳಿವೆ.