ಕೌರವರೆದುರು ಪತ್ನಿ ದ್ರೌಪದಿಯನ್ನೇ ಜೂಜಿಗೆ ಇಟ್ಟು ಮಹಾಭಾರತವೇ ಸೃಷ್ಟಿಸಿದ ಪ್ರಸಂಗವನ್ನು ನೆನಪಿಸುವ ಸಂದರ್ಭವಿದು. ಇಲ್ಲಿನ ವ್ಯಕ್ತಿಯೊಬ್ಬ ಇಸ್ಪೀಟ್ ಆಡಲು ಹೆಂಡತಿಯನ್ನು ಪಣಕ್ಕಿಟ್ಟು ಸೋತ ಮೇಲೆ ಥೇಟ್ ಧರ್ಮರಾಯನಂತೆ ನಡೆದುಕೊಂಡಿದ್ದಾನೆ. ಆದರೆ ಪತ್ನಿ ದ್ರೌಪತಿಯಾಗಬಹುದು ಎಂಬ ಆತನ ಕಲ್ಪನೆ ಮಾತ್ರ ಸುಳ್ಳಾಗಿದೆ!
ಲಕ್ನೋದಿಂದ 400 ಕಿಲೋ ಮೀಟರ್ ದೂರದ ಭಾಗ್ಪತ್ ಜಿಲ್ಲೆಯ ಭಿಲ್ಲಾಚ್ಪುರ ಗ್ರಾಮದ ರಹೀಸು ಎಂಬಾತನೇ ಈ ಆಧುನಿಕ ಧರ್ಮರಾಯ. ಆತ ಫಿರೋಜ್ ಎಂಬಾತನ ಜತೆ ಜೂಜಾಟದಲ್ಲಿ ಸೋತು ಸುಣ್ಣವಾಗಿದ್ದ. ಕೈಯಲ್ಲಿದ್ದ ಹಣವೆಲ್ಲ ಮುಗಿದ ಮೇಲೆ ಹೆಂಡತಿಯನ್ನೂ ಪಣಕ್ಕಿಡಲು ಹಿಂದೆ ಮುಂದೆ ನೋಡದ ರಹೀಸು ದುರದೃಷ್ಟವಶಾತ್ ಅಲ್ಲೂ ಸೋತ.
ಮನೆಗೆ ಬಂದವನೇ ಕೊಟ್ಟ ಮಾತಿನಂತೆ ಪತ್ನಿಯನ್ನು ಫಿರೋಜ್ ಮನೆಗೆ ತಳ್ಳಿದ. ಅಲ್ಲಿಂದ ಅದ್ಹೇಗೋ ತಪ್ಪಿಸಿಕೊಂಡು ಬಂದಿರುವ ರಹೀಸುವಿನ 32ರ ಪತ್ನಿ ಪೊಲೀಸರೆದುರು ಅಲವತ್ತುಕೊಂಡಿದ್ದಾಳೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಪಿ. ಸಿಂಗ್ ಇದೀಗ 'ಆಧುನಿಕ ಮಹಾಭಾರತ'ದ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಹೆಂಡತಿಯನ್ನೇ ಜೂಜಿಗಿಟ್ಟ ರಹೀಸು ಮತ್ತು ಫಿರೋಜ್ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಹುಡುಕಲು ಪೊಲೀಸ್ ತಂಡಗಳನ್ನೂ ರಚಿಸಲಾಗಿದೆ.
ಪ್ರಕರಣ ತಿಳಿಯುತ್ತಿದ್ದಂತೆ ನಮಗೆ ಆಘಾತವಾಯಿತು. ಇದರ ಬಗ್ಗೆ ಅಗತ್ಯ ತನಿಖೆಗಾಗಿ ಆದೇಶ ನೀಡಲಾಗಿದ್ದು, ಘಟನೆ ಹಿಂದೆ ಯಾರೆಲ್ಲ ಇದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತೇವೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಂಗ್ ತಿಳಿಸಿದ್ದಾರೆ.