ಅಖಂಡ ಆಂಧ್ರಪ್ರದೇಶಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಮನಗಂಡ ಚಿತ್ರನಟ, ಪ್ರಜಾರಾಜ್ಯಂ ಮುಖ್ಯಸ್ಥ ಚಿರಂಜೀವಿ ಕೂಡ ತೆಲಂಗಾಣ ವಿರೋಧಿ ನಿಲುವನ್ನು ಪ್ರಕಟಿಸಿದ್ದು, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚಿರಂಜೀವಿ, ಜನತೆಯ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಪ್ರಜಾರಾಜ್ಯ ಪಕ್ಷವು ತನ್ನ ತೆಲಂಗಾಣ ಪರ ನಿಲುವನ್ನು ಬದಲಾಯಿಸಿದೆ. ಮುಂದಿನ ದಿನಗಳಲ್ಲಿ ಆಂಧ್ರಕ್ಕಾಗಿ ಪೂರ್ಣಪ್ರಮಾಣದ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.
ಈ ನಿಲುವನ್ನು ಬದಲಾಯಿಸಿದ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದು ಪತ್ರಕರ್ತರೆದುರೇ ರಾಜಿನಾಮೆ ಪತ್ರಕ್ಕೆ ಸಹಿ ಹಾಕಿದ ಬಳಿಕ ಅವರು, ತಾನು ಸ್ಪೀಕರ್ ಕಿರಣ್ ಕುಮಾರ್ ರೆಡ್ಡಿಯವರಿಗೆ ಪತ್ರವನ್ನು ತಲುಪಿಸಲಿರುವುದಾಗಿ ತಿಳಿಸಿದರು.
ರಾಯಲಸೀಮೆ ಪ್ರಾಂತ್ಯದಲ್ಲಿ ಬರುವ ತಿರುಪತಿ ವಿಧಾನಸಭಾ ಕ್ಷೇತ್ರದಿಂದ ಚಿರಂಜೀವಿ ಆಯ್ಕೆಯಾಗಿದ್ದರು. ತಿರುಪತಿಯಿಂದಲೇ ತನ್ನ ಪ್ರಜಾರಾಜ್ಯಂ ಪಕ್ಷಕ್ಕೆ ಚಾಲನೆ ನೀಡಿದ್ದರು ಎಂಬುವುದು ಕೂಡ ವಿಶೇಷ.
18 ಮಂದಿ ಶಾಸಕರನ್ನು ಹೊಂದಿರುವ ಪ್ರಜಾರಾಜ್ಯಂ ಚಿರಂಜೀವಿ ರಾಜೀನಾಮೆ ಸಲ್ಲಿಸುವುದರೊಂದಿಗೆ ರಾಜೀನಾಮೆ ನೀಡಿದ ಶಾಸಕ ಸಂಖ್ಯೆ 15ಕ್ಕೇರಿದೆ. 14 ಶಾಸಕರು ಈ ಹಿಂದೆಯೇ ರಾಜೀನಾಮೆ ಸಲ್ಲಿಸಿದ್ದರು. ಪ್ರಜಾರಾಜ್ಯಂ ತೆಲಂಗಾಣ ಪ್ರಾಂತ್ಯದಲ್ಲಿ ಕೇವಲ ಇಬ್ಬರು ಶಾಸಕರನ್ನಷ್ಟೇ ಹೊಂದಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್, ಟಿಡಿಪಿಗಳನ್ನು ತರಾಟೆಗೆ ತೆಗೆದುಕೊಂಡ ಚಿರಂಜೀವಿ, ಇದಕ್ಕೆಲ್ಲ ನೀವೇ ಕಾರಣ ಎಂದು ಆರೋಪಿಸಿದರು.
ಕಾಂಗ್ರೆಸ್ ಯಾವುದೇ ಪಕ್ಷಗಳನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ತೆಲಂಗಾಣ ನಿರ್ಧಾರಕ್ಕೆ ಬಂದಿದೆ. ಇದು ಸರಿಯಲ್ಲ. ರಾಜಕಾರಣಿಗಳು ಜನತೆಯ ಭಾವನೆಗಳನ್ನು ಗೌರವಿಸುವ ಅಗತ್ಯವಿದೆ ಎಂದರು.
ಅಖಂಡ ಆಂಧ್ರಕ್ಕಾಗಿ ಇಂತಹ ಬೃಹತ್ ಹೋರಾಟ ನಡೆಯುತ್ತದೆ ಎಂದು ಯಾರು ಕೂಡ ನಿರೀಕ್ಷಿಸಿರಲಿಲ್ಲ. ಒಂದು ಪ್ರಾಂತ್ಯದ ಸಮಸ್ಯೆಗೆ ಪ್ರತ್ಯೇಕ ರಾಜ್ಯವೇ ಪರಿಹಾರವಲ್ಲ. ಹಾಗಾಗಿ ತೆಲಂಗಾಣಕ್ಕೆ ರಾಜ್ಯ ಕಲ್ಪಿಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರ ಕಾಣದು. ಅಖಂಡವಾಗಿದ್ದುಕೊಂಡೇ ತಮ್ಮ ಪಕ್ಷ ಸಮಾನತೆಗೆ ಯತ್ನಿಸಲಿದೆ ಎಂದು ಚಿರಂಜೀವಿ ಹೇಳಿದರು.