ಶಿಕ್ಷಕಿಯರು ಸರಿಯಾದ ಬ್ಲೌಸ್ ಹಾಕ್ಕೊಳ್ಳಿ ಎಂದ ತಮಿಳುನಾಡು!
ಚೆನ್ನೈ, ಗುರುವಾರ, 17 ಡಿಸೆಂಬರ್ 2009( 13:27 IST )
ಇಂತದ್ದೊಂದು ಆದೇಶ ನೀಡಿರುವುದು ತಮಿಳುನಾಡಿನ ಘನ ರಾಜ್ಯ ಸರಕಾರ. ನೀವು ಗೌರವಾನ್ವಿತ ಹುದ್ದೆಯಲ್ಲಿರುವವರು ಮತ್ತು ಮಕ್ಕಳಿಗೆ ಮಾದರಿಯಾಗಿರಬೇಕಾದವರು; ಹಾಗಾಗಿ ದಿರಿಸಿನಲ್ಲಿ ಸಭ್ಯತೆಯಿರಲಿ ಎಂದು ಶಿಕ್ಷಣ ಇಲಾಖೆ ಹೇಳಿದೆಯಂತೆ.
ಸರಕಾರದ ಈ ಸೂಚನೆಗೆ ಬಹುತೇಕ ಶಿಕ್ಷಕ-ಶಿಕ್ಷಕಿಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ನಾವು ಪಾಠ ಮಾಡುವ ರೀತಿಯನ್ನು ಗಮನಿಸಿ, ನಿರ್ದೇಶನಗಳನ್ನು ನೀಡುವುದನ್ನು ಒಪ್ಪಿಕೊಳ್ಳಬಹುದು; ಆದರೆ ಇದೆಂತಹ ಸೂಚನೆಗಳು ಎಂದು ಅವರು ತಮ್ಮ ಹೇವರಿಕೆಯನ್ನು ಹೊರಗೆಡವಿದ್ದಾರೆ.
WD
ಇತ್ತೀಚೆಗಷ್ಟೇ ಸರಕಾರಿ ಶಾಲೆಗಳ ಕೆಲವು ವಿದ್ಯಾರ್ಥಿಗಳು ತಮ್ಮ ಅಧ್ಯಾಪಕ-ಅಧ್ಯಾಪಿಕೆಯರ ಅಸಭ್ಯ ದಿರಿಸುಗಳ ಬಗ್ಗೆ ಮನೆಯಲ್ಲಿ ದೂರಿಕೊಂಡಿದ್ದರು. ಇದನ್ನು ಹೆತ್ತವರು ಸರಕಾರದ ಗಮನಕ್ಕೆ ತಂದ ಹಿನ್ನಲೆಯಲ್ಲಿ ಸರಕಾರ ಈ ಸೂಚನೆಯನ್ನು ನೀಡಿದೆ.
ಶಿಕ್ಷಕಿಯರು ಮಾಮೂಲಿ ರವಿಕೆ (ಬ್ಲೌಸ್)ಗಳ ಬದಲಿಗೆ ಫ್ಯಾಷನ್ ಕಟ್‌ಗಳನ್ನು ಹೊಂದಿರುವ ಅಶ್ಲೀಲವಾಗಿ ಕಾಣಿಸುವ ರವಿಕೆಗಳನ್ನು ಧರಿಸುತ್ತಾರೆ. ಶಿಕ್ಷಕರು ಕೂಡ ವಿಶೇಷ ಫ್ಯಾಷನ್ ಉಡುಪುಗಳಿಗೆ ಹೆಚ್ಚಿನ ಒತ್ತು ಕೊಡುತ್ತಾರೆ ಎಂದು ಹೆತ್ತವರು ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರು.
ನಮ್ಮ ಬೋಧನಾ ಶೈಲಿ ಹೇಗಿದೆ ಎಂಬುದನ್ನು ಸಂಬಂಧಪಟ್ಟವರು ಪರಿಶೀಲಿಸುವುದು ಓಕೆ. ಆದರೆ ಇದು ಉತ್ತಮ ನಡೆಯಲ್ಲ. ಶಿಕ್ಷಕಿಯರಾದ ನಾವು ಸೀರೆಯನ್ನೇ ಉಡಬೇಕೆಂದು ನಮಗೆಲ್ಲ ಗೊತ್ತು, ಈ ನಿಯಮಗಳನ್ನು ನಮಗೆ ತರಬೇತಿ ಸಂದರ್ಭದಲ್ಲೇ ಕಲಿಸಲಾಗಿತ್ತು. ಆದರೆ ಇಲಾಖೆಯ 'ಸಭ್ಯತೆ' ಪಾಠವೇನು ಎಂಬುದು ತಿಳಿಯುತ್ತಿಲ್ಲ ಎಂದು ಸರಕಾರಿ ಶಾಲಾ ಅಧ್ಯಾಪಿಕೆಯೊಬ್ಬರು ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಯಾರೋ ಒಬ್ಬಿಬ್ಬರು ಆ ರೀತಿ ಡ್ರೆಸ್ ಮಾಡಿಕೊಂಡು ಬಂದಿರುವುದಕ್ಕೆ ರಾಜ್ಯದಾದ್ಯಂತದ ಶಿಕ್ಷಕ-ಶಿಕ್ಷಕಿಯರಿಗೆ ಸಂದೇಶ ರವಾನಿಸುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯ.
ಆದರೆ ಅಧಿಕಾರಿಗಳ ಪ್ರಕಾರ ಈ ನಿಯಮವೇನೂ ಹೊಸತಲ್ಲ. ಹಲವು ವರ್ಷಗಳಿಂದ ಜಾರಿಯಲ್ಲಿರುವ ನಿಯಮದ ಕುರಿತು ನೆನಪೋಲೆಯನ್ನಷ್ಟೇ ಕಳುಹಿಸಲಾಗಿತ್ತು. ಪಾಠ ಮಾಡುವ ಶಿಕ್ಷಕರು ಸಭ್ಯತೆಯನ್ನು ಪ್ರದರ್ಶಿಸದಿದ್ದರೆ ಹೇಗೆ ಮಾದರಿಯಾಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಮಹಿಳಾ ಹಕ್ಕುಗಳ ರಕ್ಷಣಾ ಹೋರಾಟಗಾರ್ತಿಯೊಬ್ಬರು, ಮಹಿಳೆ ಆಕೆಗೆ ಯಾವ ಉಡುಪು ಹೊಂದಾಣಿಕೆಯಾಗುತ್ತದೋ, ಅದನ್ನು ಧರಿಸುತ್ತಾಳೆ; ಅದನ್ನೆಲ್ಲ ಪ್ರಶ್ನಿಸಲು ಇಲಾಖೆಗೆ ಯಾವುದೇ ಹಕ್ಕಿಲ್ಲ. ಬಟ್ಟೆಯ ಆಯ್ಕೆ ಆಕೆಯ ವೈಯಕ್ತಿಕ ವಿಚಾರವಾಗಿದ್ದು, ಇದು ಕಲಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.