ಕರ್ನಾಟಕ ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಮಾಲಿಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ಸಿಬಿಐ ತನಿಖೆಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಗೆ ಸರ್ವೋಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ ತಡೆಯಾಜ್ಞೆ ತೀರ್ಪನ್ನು ಪ್ರಶ್ನಿಸಿ ಆಂಧ್ರಪ್ರದೇಶ ಸರಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿರುವ ನ್ಯಾಯಾಲಯವು, ಸಿಬಿಐ ತನಿಖೆಗೆ ಅಸ್ತು ಎಂದಿದೆ. ಇದು ಬಳ್ಳಾರಿಯಲ್ಲೂ ಗಣಿ ಹೊಂದಿರುವ ರೆಡ್ಡಿಗಳಿಗೆ ಭಾರೀ ಹಿನ್ನಡೆಯೆಂದೇ ಹೇಳಲಾಗಿದೆ.
ಆಂಧ್ರ ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿದ್ದು, ವಿಚಾರಣೆಯನ್ನು ಜನವರಿ ನಾಲ್ಕಕ್ಕೆ ಮುಂದೂಡಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕರ್ನಾಟಕ ಸಚಿವರ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿದ್ದ ಆಂಧ್ರ ಸರಕಾರ ಕೆಲ ದಿನಗಳ ಹಿಂದಷ್ಟೇ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು.
ಆದರೆ ಸಿಬಿಐ ತನಿಖೆಗೆ ಆಂಧ್ರ ಉಚ್ಚ ನ್ಯಾಯಾಲಯವು ಆರು ವಾರಗಳ ತಡೆಯಾಜ್ಞೆ ನೀಡಿತ್ತು. ಇದರ ಬೆನ್ನಿಗೆ ಸುಪ್ರೀಂ ಮೆಟ್ಟಿಲೇರಿರುವ ಆಂಧ್ರ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದೆ.
ಆಂಧ್ರಪ್ರದೇಶ ಸರಕಾರ ಓಬಳಾಪುರಂ ಗಣಿಗಾರಿಕೆಗೆ ಹೇರಿರುವ ನಿಷೇಧದ ಮೇಲೂ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.