ಭಯೋತ್ಪಾದಕ ಚಟುವಟಿಕೆಗಳ ಆರೋಪದಲ್ಲಿ ಬಂಧಿತರಾಗಿ ಬಿಡುಗಡೆಯಾಗಿರುವ ಕೇರಳದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥ ಮತ್ತು ವಿವಾದಾತ್ಮಕ ರಾಜಕಾರಣಿ ಅಬ್ದುಲ್ ನಾಸಿರ್ ಮದನಿ, ತನ್ನ ಪತ್ನಿ ಸುಫಿಯಾಳಿಗೆ ಲಷ್ಕರ್ ಇ ತೋಯ್ಬಾ ಸಂಘಟನೆಯ ಸಂಪರ್ಕವಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಮದನಿ, ನನ್ನ ಪತ್ನಿಯು ನಜೀರ್ (ಲಷ್ಕರ್‌ನ ದಕ್ಷಿಣ ಭಾರತ ಘಟಕದ ಕಮಾಂಡರ್)ನ ಕರೆಗಳನ್ನು ಸ್ವೀಕರಿಸಿದ್ದಿರಬಹುದು, ಆದರೆ ಬೇರಾವುದೇ ಸಂಬಂಧವಿಲ್ಲ ಎಂದಿದ್ದಾರೆ. ನಜೀರ್ ಇತ್ತೀಚೆಗೆ ಬಂಧಿತನಾಗಿದ್ದು, ಈತ 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಪ್ರಧಾನ ಆರೋಪಿಯೂ ಆಗಿದ್ದಾನೆ.
ಟಿ.ನಜೀರ್ ಜೊತೆ ವೈಯಕ್ತಿಕವಾಗಿ ಯಾವುದೇ ಸಂಬಂಧವಿಲ್ಲ. ಆದರೆ ನಾನು ಜೈಲಿನಲ್ಲಿದ್ದಾಗ ಹಲವಾರು ಮಂದಿ ಆಕೆಯನ್ನು ಫೋನ್ ಮೂಲಕ ಸಂಪರ್ಕಿಸಿದ್ದರು. ಅವರಲ್ಲೊಬ್ಬ ಉಗ್ರಗಾಮಿಯಾಗಿದ್ದ ಎಂಬ ಅಂಶ ಆಕೆಗೆ ತಿಳಿಯುವುದಾದರೂ ಹೇಗೆ? 'ಉಸ್ತಾದ್ ಬರುತ್ತಾರೆ, ಚಿಂತಿಸಬೇಡಿ' ಎಂದು ಹಲವಾರು ಮಂದಿ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ಆಕೆ ಈ ಫೋನ್ ಕರೆಗಳನ್ನೆಲ್ಲಾ ಸ್ವೀಕರಿಸಿದ್ದಾಳಷ್ಟೇ ಎಂದು ಮದನಿ ಸ್ಪಷ್ಟನೆ ನೀಡಿದ್ದಾರೆ.
60ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ 1998ರ ಕೊಯಮತ್ತೂರು ಬಸ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮದನಿಯು ಜೈಲು ಸೇರಿ ಬಿಡುಗಡೆಗೊಂಡಿದ್ದರು. ಮದನಿ ಬಿಡುಗಡೆಗೊಳಿಸಿರುವ ಕ್ರಮವು ಓಟ್ ಬ್ಯಾಂಕ್ ರಾಜಕೀಯ ಎಂದು ತಮಿಳುನಾಡಿನ ಡಿಎಂಕೆ ಸರಕಾರವು ತೀವ್ರ ಟೀಕೆಗೆ ಗುರಿಯಾಗಿತ್ತು. ಕೇರಳ ವಿಧಾನಸಭೆಯು 2006ರಲ್ಲಿ ಮದನಿಯನ್ನು 'ಮಾನವೀಯ ನೆಲೆಯಲ್ಲಿ' ಬಿಡುಗಡೆಗೊಳಿಸಬೇಕೆಂದು ಸರ್ವಾನುಮತದ ನಿರ್ಣಯವನ್ನೂ ಅಂಗೀಕರಿಸಿತ್ತು.