ಕೋಟಾದಲ್ಲಿರುವ ನಿರ್ಮಾಣಹಂತದಲ್ಲಿದ್ದ ಸೇತುವೇ ಕುಸಿದು 17 ಮಂದಿ ಸಾವನ್ನಪ್ಪಿದ್ದು, 30 ಮಂದಿ ಕುಸಿದ ಸೇತುವೆಯೊಳಗೆ ಸಿಲುಕಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಜೋಧಪುರ್‌ನಿಂದ 220 ಮೈಲುಗಳ ದೂರದಲ್ಲಿರುವ ಕೋಟಾದಲ್ಲಿ, ಚಂಬಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಕುಸಿದ ಘಟನೆ ವರದಿಯಾಗಿದೆ.
ಸಮರೋಪಾದಿಯಲ್ಲಿ ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, 17 ಶವಗಳನ್ನು ಪತ್ತೆ ಹಚ್ಚಿದ್ದಾರೆ.ಹಲವಾರು ಕಾರ್ಮಿಕರು ಸೇತುವೆ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ ಎಂದು ಗೃಹ ಸಚಿವ ಶಾಂತಿ ಧಾರಿವಾಲ್ ಹೇಳಿದ್ದಾರೆ.
ನಾವಿಕ ಪಡೆಯ ತಂಡಗಳು, ನದಿಯಲ್ಲಿ ಕೊಚ್ಚಿಹೋಗಿರಬಹುದಾದ ಕಾರ್ಮಿಕರ ಹುಡುಕಾಟದಲ್ಲಿ ತೊಡಗಿವೆ.ಗಾಯಗೊಂಡ 12 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣಕೊರಿಯಾದ ಹುಂಡೈ ಇಂಜಿನಿಯರಿಂಗ್ ಆಂಡ್ ಗಾಮನ್ ಇಂಡಿಯಾ ಕಳೆದ 2007ರಿಂದ ಸೇತುವೆ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಕಂಪೆನಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.