ಜಾರ್ಖಂಡ್‌ನಲ್ಲಿ ಮಗದೊಮ್ಮೆ ಚೌಚೌ ಸರಕಾರ ರಚನೆಗೆ ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರ ಬಿರುಸುಗೊಂಡಿದೆಯಾದರೂ, ಎಲ್ಲ ತತ್ವ ಸಿದ್ಧಾಂತಗಳು ಗಾಳಿಗೆ ತೂರಲ್ಪಟ್ಟು, ಕಳಂಕಿತ ಜೆಎಂಎಂ ಜೊತೆಗೆ ಬಿಜೆಪಿ ಕೈಜೋಡಿಸಿ ಸರಕಾರ ರಚಿಸುವ ಸಾಧ್ಯತೆಗಳು ದಟ್ಟವಾಗಿವೆ.
ಬಿಜೆಪಿಯೊಂದಿಗೆ ಕೈಜೋಡಿಸಿ ಹೊಸ ಸರಕಾರ ರಚಿಸುತ್ತೇವೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಘೋಷಿಸಿದೆ, ಆದರೆ ಈ ಕುರಿತು ಪಕ್ಷದ ಕೇಂದ್ರೀಯ ನಾಯಕತ್ವದೊಂದಿಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ಮುಖ್ಯಮಂತ್ರಿ ಪಟ್ಟ ತನಗೇ ಬೇಕು ಎಂದು ಜೆಎಂಎಂ ಕಳಂಕಿತ ನಾಯಕ ಶಿಬು ಸೋರೆನ್ ಪಟ್ಟು ಹಿಡಿದಿದ್ದರ ಪರಿಣಾಮವಾಗಿ, ಕಾಂಗ್ರೆಸ್-ಜೆಎಂಎಂ ಮಾತುಕತೆ ಮುರಿದುಬಿದ್ದಿತ್ತು. ಕಾಂಗ್ರೆಸ್ ಮಿತ್ರರು ಏಕೈಕ ಅತಿದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿದ ಪರಿಣಾಮ ಕಾಂಗ್ರೆಸ್, ಈ ಪಟ್ಟ ಬಿಟ್ಟುಕೊಡಲು ಸಿದ್ಧವಿರಲಿಲ್ಲ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಶನಿವಾರ ನಡೆಯಲಿದ್ದು, ಶಾಸಕಾಂಗ ಪಕ್ಷ ನಾಯಕನ ಆಯ್ಕೆಯೂ ನಡೆಯಲಿದೆ. ಈ ಸಭೆಯಲ್ಲಿ ಸರಕಾರ ರಚನೆಗೆ ಬೆಂಬಲ ನೀಡುವ ಕುರಿತು ಚರ್ಚಿಸಲಾಗುತ್ತದೆ ಎಂದು ಬಿಜೆಪಿಯ ಜಾರ್ಖಂಡ್ ಉಸ್ತುವಾರಿ ನಾಯಕಿ ಕರುಣಾ ಶುಕ್ಲ ತಿಳಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ರಘುವರ್ ದಾಸ್ ಅವರು ಜೆಎಂಎಂ ಜೊತೆ ಮಾತುಕತೆಯಲ್ಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ಜಾರ್ಖಂಡ್ ವಿಕಾಸ್ ಮೋರ್ಚಾ-ಪ್ರಜಾತಾಂತ್ರಿಕ (ಜೆವಿಎಂ-ಪಿ) ಒಟ್ಟಾಗಿ 25 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, 81 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 41 ಸೀಟುಗಳು ಬೇಕು.
ಜೆಎಂಎಂ ಮತ್ತು ಬಿಜೆಪಿಗಳು ತಲಾ 18 ಸ್ಥಾನಗಳನ್ನೂ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) ತಲಾ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಮಿತ್ರಪಕ್ಷ ಜೆಡಿಯು 2 ಸ್ಥಾನ ಹೊಂದಿದೆ.
ಮೂಲಗಳ ಪ್ರಕಾರ, ಸೋರೆನ್ ಮುಖ್ಯಮಂತ್ರಿತ್ವಕ್ಕೆ ಬೆಂಬಲಿಸಬೇಕಿದ್ದರೆ, ಉಪಮುಖ್ಯಮಂತ್ರಿ ಸ್ಥಾನವೂ ಸೇರಿದಂತೆ ಕನಿಷ್ಠ ಏಳು ಕ್ಯಾಬಿನೆಟ್ ದರ್ಜೆಯ ಹುದ್ದೆಗಳನ್ನು ಬಿಜೆಪಿ ಆಗ್ರಹಿಸಿದೆ. ಅತ್ತ ಕಡೆಯಿಂದ ಎಜೆಎಸ್‌ಯು ಕೂಡ ಕನಿಷ್ಠ ಎರಡು ಕ್ಯಾಬಿನೆಟ್ ಮತ್ತು ಪಕ್ಷಾಧ್ಯಕ್ಷ ಸುದೇಶ್ ಮಹತೋ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಮುಂದಿಟ್ಟಿದೆ.
ಬಿಜೆಪಿ ಮತ್ತು ಎಜೆಎಸ್‌ಯುಗಳೆರಡೂ ಪ್ರಮುಖ ಇಲಾಖೆಗಳಾದ ವಿದ್ಯುತ್, ಗ್ರಾಮೀಣಾಭಿವೃದ್ಧಿ ಮತ್ತು ಗಣಿ ಖಾತೆಗಳನ್ನು ಕೇಳಿವೆ.
ಮೂಲಗಳ ಪ್ರಕಾರ, ಎರಡೂ ಪಕ್ಷಗಳಿಗೆ ಒಂದೊಂದು ಉಪಮುಖ್ಯಮಂತ್ರಿ ಪಟ್ಟವನ್ನು ನೀಡಲು ಜೆಎಂಎಂ ನಿರ್ಧರಿಸಿದೆ ಎಂದು ಹೇಳಲಾಗಿದ್ದು, ಶನಿವಾರವೇ ಸರಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಗಳಿವೆ.
ಈ ಮಧ್ಯೆ, ಕಾಂಗ್ರೆಸ್ ಮತ್ತು ಜೆವಿಎಂ-ಪಿಗಳು ಚರ್ಚೆ ನಡೆಸಿದ್ದು, ಜೆಎಂಎಂ ಅನ್ನು ಅಧಿಕಾರದಿಂದ ದೂರವಿಡುವ ಕಾರ್ಯತಂತ್ರ ರೂಪಿಸುತ್ತಿವೆ. ಆರ್‌ಜೆಡಿ ಹಾಗೂ ಸ್ವತಂತ್ರರ ಬೆಂಬಲ ದೊರೆತಲ್ಲಿ ಕಾಂಗ್ರೆಸ್ ಪಕ್ಷವೂ ಸರಕಾರ ರಚನೆಗೆ ಅರ್ಹತೆ ಪಡೆಯುತ್ತದೆ.
ಗುರುವಾರವೇ ಸೋರೆನ್ ಅವರು ಬಿಜೆಪಿಯತ್ತ ಒಲವು ತೋರಿಸಿದ್ದು, ತಾನು ಬಿಜೆಪಿಯನ್ನು "ಕೋಮುವಾದಿ" ಎಂದು ಯಾವತ್ತೂ ಕರೆದಿರಲಿಲ್ಲ ಎಂದಿದ್ದರು. ಮಾತ್ರನವಲ್ಲದೆ, ಬಿಜೆಪಿಯು ನಿಮ್ಮನ್ನು ಈ ಹಿಂದೆ ಕಟುವಾಗಿ ಟೀಕಿಸಿತ್ತಲ್ಲ ಎಂದು ಕೇಳಿದಾಗ, 'ಹಳೆಯದು ಯಾರಿಗೆ ನೆನಪಿರುತ್ತದೆ' ಎಂದು ಉಡಾಫೆಯಿಂದ ಹೇಳಿದ್ದರು. 30 ವರ್ಷದ ಹಿಂದಿನ ಕ್ರಿಮಿನಲ್ ಕೇಸೊಂದಕ್ಕೆ ಸಂಬಂಧಿಸಿದಂತೆ 2004ರಲ್ಲಿ ಕೇಂದ್ರ ಸಚಿವರಾಗಿದ್ದ ಸೋರೆನ್ ತಲೆದಂಡಕ್ಕಾಗಿ ಆಗ್ರಹಿಸಿ ಬಿಜೆಪಿಯು ಸಂಸತ್ತಿನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದು ಇಲ್ಲಿ ಗಮನಾರ್ಹ.
ಸದ್ಯಕ್ಕೆ ಲೋಕಸಭಾ ಸದಸ್ಯರಾಗಿರುವ ಸೋರೆನ್ ಅವರನ್ನು ಶುಕ್ರವಾರ, ಜೆಎಂಎಂ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಾಗಿತ್ತು. ಈ ಹಿಂದೆ ಮುಖ್ಯಮಂತ್ರಿ ಪಟ್ಟಕ್ಕೇರಿ, ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನಪ್ಪಿದ್ದ ಸೋರೆನ್, ಪದತ್ಯಾಗ ಮಾಡಬೇಕಾಗಿಬಂದಿತ್ತು.