ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರುಚಿಕಾ ಪ್ರಕರಣ: ಪ್ರಭಾವಿ ರಾಥೋಡ್ ಕೇಸು ಮರುವಿಚಾರಣೆ? (Ruchika Gilhotra | Rathod | Haryana | Molestation | CBI | Police Atrocity)
Bookmark and Share Feedback Print
 
PTI
19 ವರ್ಷಗಳಷ್ಟು ಹಳೆಯ, ಮಾಜಿ ಡಿಜಿಪಿಯಿಂದ ಲೈಂಗಿಕ ಕಿರುಕುಳಕ್ಕೀಡಾಗಿ ಸಾವನ್ನಪ್ಪಿದ ರುಚಿಕಾ ಗಿಲ್ಹೋತ್ರಾ ಪ್ರಕರಣವನ್ನು ಪುನಃ ವಿಚಾರಣೆಗೊಳಪಡಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಈ ಕುರಿತ ವೈದ್ಯಕೀಯ ವರದಿಯನ್ನೇ ತಿರುಚಲಾಗಿತ್ತು ಎಂದು ಆಕೆಯ ಪರವಾಗಿ 13 ವರ್ಷಗಳ ಕಾಲ ಉಚಿತವಾಗಿಯೇ ವಕಾಲತ್ತು ನಡೆಸಿದ ವಕೀಲ ಪಂಕಜ್ ಭಾರದ್ವಾಜ್ ಶನಿವಾರ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಮಧ್ಯೆ, 1990ರಲ್ಲಿ ಎಸ್.ಪಿ.ಎಸ್.ರಾಠೋಡ್ ಎಂಬ ಮಾಜಿ ಪೊಲೀಸ್ ಮಹಾ ನಿರ್ದೇಶಕ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಮೂರು ವರ್ಷಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ ರುಚಿಕಾ ಪ್ರಕರಣವನ್ನು ಪುನಃ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಶನಿವಾರ ಹೇಳಿದ್ದಾರೆ.

ರುಚಿಕಾ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದಿರುವ ಅವರು, ನ್ಯಾಯಾಲಯದ ವಿಚಾರಣೆ ಸಂದರ್ಭ ಮಹತ್ವದ ಪಾತ್ರ ವಹಿಸಿದ್ದ ವೈದ್ಯಕೀಯ ವರದಿಯಲ್ಲಿ ಸಂದೇಹ ಹುಟ್ಟಿಕೊಂಡಿದೆ. ಈ ವರದಿಯಲ್ಲಿ 14ರ ಹರೆಯದ ರುಚಿಕಾ ಸಾವಿಗೆ ತೆಳ್ಳಗಾಗುವ ಮಾತ್ರೆಯನ್ನು ಅಧಿಕವಾಗಿ ಸೇವಿಸಿದ್ದೇ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಆದರೆ, ತೆಳ್ಳಗಾಗುವ ಮಾತ್ರೆಯು ಸಾವಿಗೆ ಕಾರಣವಾಗುವ ಸಾಧ್ಯತೆಗಳು ಕಡಿಮೆ. ಕಾನೂನಿನ ಅಗತ್ಯ ಪೂರೈಸುವುದಕ್ಕಾಗಿ ಮಾತ್ರವೇ ಅಂದು ಪೊಲೀಸರು ಈ ರೀತಿ ವರದಿ ತಯಾರಿಸಿ ಕೊಟ್ಟಿರಬಹುದು ಎಂದು ವಕೀಲ ಭಾರದ್ವಾಜ್ ಹೇಳಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯವು ಕಳೆದ ಸೋಮವಾರ ಮಾಜಿ ಡಿಜಿಪಿ ರಾಥೋಡ್ ಅವರನ್ನು ತಪ್ಪಿತಸ್ಥ ಎಂದು ಪತ್ತೆ ಹಚ್ಚಿದ್ದು, ಅವರಿಗೆ ಕೇವಲ ಆರು ತಿಂಗಳ ಜೈಲು ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಿತ್ತು. ತಕ್ಷಣವೇ ಜಾಮೀನು ಪಡೆದುಕೊಳ್ಳುವಲ್ಲಿ ರಾಥೋಡ್ ಸಫಲರಾಗಿದ್ದರು. ಕಳೆದ 19 ವರ್ಷಗಳಲ್ಲಿ ನ್ಯಾಯಾಲಯದಲ್ಲಿ ರುಚಿಕಾ ಕುಟುಂಬ ಹೋರಾಟ ನಡೆಸಿದ್ದು, ವಿಷಯವು ಸುಪ್ರೀಂ ಕೋರ್ಟಿನ ವರೆಗೂ ಹೋದ ಬಳಿಕ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಇದೀಗ ಮಾಧ್ಯಮಗಳು ಈ ಪ್ರಕರಣವನ್ನು ರಾಷ್ಟ್ರೀಯ ವಿಷಯವನ್ನಾಗಿಸಿ, ರುಚಿಕಾಳಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸುತ್ತಿವೆ.

ಅಂದು ಐಜಿಪಿಯಾಗಿದ್ದ ರಾಥೋಡ್‌ರಿಂದ ಲೈಂಗಿಕ ಕಿರುಕುಳಕ್ಕೀಡಾಗಿದ್ದ ರುಚಿಕಾಳಿಗೆ ಮತ್ತು ಅವರ ಕುಟುಂಬಕ್ಕೆ ಪೊಲೀಸರು ಭಾರೀ ಕಿರುಕುಳ ನೀಡುತ್ತಿದ್ದರು. ಪೊಲೀಸರಿಗೆ ಈ ಕುರಿತು ದೂರು ನೀಡಿದ್ದೇ ಇದಕ್ಕೆ ಕಾರಣ. ಇದರಿಂದಾಗಿ ರಾಜಕೀಯ ಒತ್ತಡದಿಂದ ಆಕೆಯನ್ನು ಶಾಲೆಯಿಂದಲೇ ಉಚ್ಚಾಟಿಸಲಾಯಿತು ಮತ್ತು ಆಕೆಯ ಸಹೋದರನ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಿ, ಚಿತ್ರ ಹಿಂಸೆ ನೀಡಲಾಗಿತ್ತು. ಇವೆಲ್ಲ ಘಟನಾವಳಿಗಳಿಂದ ತೀವ್ರವಾಗಿ ಖಿನ್ನಳಾದ ಈ ಹುಡುಗಿ ಮೂರು ವರ್ಷಗಳ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ರಾಥೋಡ್‌ಗೆ ಭಾರೀ ಪ್ರಮಾಣದಲ್ಲಿ ರಾಜಕೀಯ ಪ್ರಭಾವವಿದ್ದು, ಇದರಿಂದಾಗಿಯೇ ಅವರು ಇದುವರೆಗೆ ಯಾವುದೇ ಶಿಕ್ಷೆಯಿಲ್ಲದೆ ಪಾರಾಗಿದ್ದರು. ರುಚಿಕಾ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದ ಆಕೆಯ ಸಹೋದರ ಅಶು ಮೇಲೆಯೇ ವಾಹನ ಕಳ್ಳತನ ಕೇಸು ಜಡಿದು ತೀವ್ರವಾಗಿ ಚಿತ್ರ ಹಿಂಸೆ ನೀಡಲಾಗಿತ್ತು.

ಇದೀಗ ಮಾಧ್ಯಮಗಳಿಂದ ಒತ್ತಡ ಹೆಚ್ಚಾದಾಗ ಎಚ್ಚೆತ್ತುಕೊಂಡಿರುವ ಕೇಂದ್ರ ಗೃಹ ಸಚಿವಾಲಯವು, ರಾಥೋಡ್‌ಗೆ ನೀಡಲಾದ ಪೊಲೀಸ್ ಪದಕಗಳನ್ನು ಯಾಕೆ ಹಿಂತೆಗೆದುಕೊಳ್ಳಬಾರದು ಮತ್ತು ಪಿಂಚಣಿ ಸೌಲಭ್ಯವನ್ನೇಕೆ ಕಡಿತಗೊಳಿಸಬಾರದು ಎಂದು ಕೋರಿ ಶನಿವಾರ ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ