ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆ ಕೂಡಲೇ ಈಡೇರಿಸುವಂತೆ ಪಟ್ಟ ಹಿಡಿದಿರುವ ಹಿನ್ನೆಲೆಯಲ್ಲಿ ಆಂಧ್ರದಾದ್ಯಂತ ಹಿಂಸಾಚಾರ ವ್ಯಾಪಕವಾಗಿದ್ದು, ಏತನ್ಮಧ್ಯೆ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳದ ಹೊರತು ಕೇಂದ್ರ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮೊದಲು ಶಾಂತವಾಗಬೇಕು. ನಂತರವಷ್ಟೇ ಪ್ರತ್ಯೇಕ ತೆಲಂಗಾಣ ರಾಜ್ಯದ ಅಸ್ತಿತ್ವದ ಕುರಿತು ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಉಸ್ಮಾನಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದು ಶನಿವಾರಕ್ಕೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಕಿಚ್ಚು ಎಲ್ಲೆಡೆ ವ್ಯಾಪಕವಾಗಿ ಪಸರಿಸಿದ್ದು, ಹಿಂಸಾಚಾರ ಭುಗಿಲೆದ್ದಿದೆ.
ಸೋಮವಾರದೊಳಗೆ ಪ್ರತ್ಯೇಕ ತೆಲಂಗಾಣ ರಾಜ್ಯದ ಕುರಿತು ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಘೋಷಿಸದಿದ್ದರೆ, ಡಿಸೆಂಬರ್ 29ರಿಂದ ಅನಿರ್ದಿಷ್ಟಾವಧಿ ಬಂದ್ ನಡೆಸಲಾಗುವುದು ಎಂದು ವಿವಿಧ ರಾಜಕೀಯ ಪಕ್ಷಗಳು ಎಚ್ಚರಿಕೆ ನೀಡಿವೆ.