ಜಾರ್ಖಂಡ್ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗಿರುವ ಶಿಬು ಸೋರೆನ್ ಅವರಿಗೆ ಮುಖ್ಯಮಂತ್ರಿ ಗದ್ದುಗೆ ಏರಲು ಅವಕಾಶ ನೀಡಬಾರದು ಎಂದು ಕೊಲೆಗೀಡಾಗಿರುವ ಮಾಜಿ ಕಾರ್ಯದರ್ಶಿ ಶಶಿನಾಥ್ ಜಾ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
ತಾನು ಕಿಂಗ್ ಆಗುತ್ತೇನೆ ವಿನಃ, ಕಿಂಗ್‌ಮೇಕರ್ ಆಗಲು ತಯಾರಿಲ್ಲ ಎಂದಿರುವ ಶಿಬು ಸೋರೆನ್ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಲು ಸಜ್ಜಾಗಿದ್ದಾರೆ, ಆ ನಿಟ್ಟಿನಲ್ಲಿ 81ಸದಸ್ಯ ಬಲವುಳ್ಳ ಜಾರ್ಖಂಡ್ ವಿಧಾನಸಭೆಯಲ್ಲಿ ಶಿಬು ಪಾತ್ರ ಮಹತ್ವದ್ದಾಗಿದೆ. ಇದೀಗ ಜೆಎಂಎಂ-ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರಲು ಸಜ್ಜಾಗಿವೆ.
ಏತನ್ಮಧ್ಯೆ ಜಾ ಕೊಲೆ ಪ್ರಕರಣದಲ್ಲಿ ಶಿಬು ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಬಾಕಿ ಇರುವುದರಿಂದ ಶಿಬು ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಬಾರದು ಎಂದು ರಾಜಕೀಯ ಪಕ್ಷಗಳಿಗೆ ಕುಟುಂಬದ ಸದಸ್ಯರು ಕೋರಿದ್ದಾರೆ.
ಜಾ ಅವರ ಪುತ್ರಿ ಪ್ರೀತಿ ಮತ್ತು ಪುತ್ರ ವಿಜಯ್‌ನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಲೆ ಆರೋಪ ಎದುರಿಸುತ್ತಿರುವ ಶಿಬು ಮುಖ್ಯಮಂತ್ರಿಯಾದರೆ ಅದು ಪ್ರಜಾಪ್ರಭುತ್ವದ ದುರಂತವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.