ರುಚಿಕಾ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ತನಿಖೆ ನಡೆಸಲು ಆದೇಶ ನೀಡಲಿದೆ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ರುಚಿಕಾಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣರಾದ ಹರ್ಯಾಣ ಡಿಜಿಪಿ ಎಸ್‌ಪಿಎಸ್ ರಾಥೋಡ್ ಅವರು ಆರೋಪಿಗಳೆಂದು ಸಾಬೀತಾದರೂ ಅವರಿಗೆ ಕನಿಷ್ಠ ಶಿಕ್ಷೆಯನ್ನು ನೀಡಲಾಗಿರುವ ಸಂಗತಿ ಮಾಧ್ಯಮಗಳಲ್ಲಿ ಹೆಚ್ಚಿನ ಟೀಕೆಗೆ ಗುರಿಯಾಗಿತ್ತು. ಆ ನಿಟ್ಟಿನಲ್ಲಿ ರುಚಿಕಾ ಪ್ರಕರಣದ ಮರು ತನಿಖೆಗೆ ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.
1990ರಲ್ಲಿ ಎಸ್.ಪಿ.ಎಸ್.ರಾಠೋಡ್ ಎಂಬ ಮಾಜಿ ಪೊಲೀಸ್ ಮಹಾ ನಿರ್ದೇಶಕ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಮೂರು ವರ್ಷಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ ರುಚಿಕಾ ಪ್ರಕರಣವನ್ನು ಪುನಃ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಶನಿವಾರ ಹೇಳಿದ್ದರು.
ಸಿಬಿಐ ವಿಶೇಷ ನ್ಯಾಯಾಲಯವು ಕಳೆದ ಸೋಮವಾರ ಮಾಜಿ ಡಿಜಿಪಿ ರಾಥೋಡ್ ಅವರನ್ನು ತಪ್ಪಿತಸ್ಥ ಎಂದು ಪತ್ತೆ ಹಚ್ಚಿದ್ದು, ಅವರಿಗೆ ಕೇವಲ ಆರು ತಿಂಗಳ ಜೈಲು ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಿತ್ತು. ತಕ್ಷಣವೇ ಜಾಮೀನು ಪಡೆದುಕೊಳ್ಳುವಲ್ಲಿ ರಾಥೋಡ್ ಸಫಲರಾಗಿದ್ದರು. ಕಳೆದ 19 ವರ್ಷಗಳಲ್ಲಿ ನ್ಯಾಯಾಲಯದಲ್ಲಿ ರುಚಿಕಾ ಕುಟುಂಬ ಹೋರಾಟ ನಡೆಸಿದ್ದು, ವಿಷಯವು ಸುಪ್ರೀಂ ಕೋರ್ಟಿನ ವರೆಗೂ ಹೋದ ಬಳಿಕ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಇದೀಗ ಮಾಧ್ಯಮಗಳು ಈ ಪ್ರಕರಣವನ್ನು ರಾಷ್ಟ್ರೀಯ ವಿಷಯವನ್ನಾಗಿಸಿ, ರುಚಿಕಾಳಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸುತ್ತಿವೆ.