ಜಾರ್ಖಂಡ್‌ನಲ್ಲಿನ ರಾಜಕೀಯ ಬಿಕ್ಕಟ್ಟು ಅಂತಿಮ ಹಂತಕ್ಕೆ ತಲುಪಿದ್ದು, ಆ ನಿಟ್ಟಿನಲ್ಲಿ ನೂತನ ಸರ್ಕಾರ ರಚನೆಗಾಗಿ ಜೆಎಂಎಂ ವರಿಷ್ಠ ಶಿಬು ಸೋರೆನ್ ಅವರನ್ನು ರಾಜ್ಯಪಾಲ ಕೆ.ಶಂಕರನಾರಾಯಣನ್ ಆಹ್ವಾನ ನೀಡಿದ್ದಾರೆ.
ಜಾರ್ಖಂಡ್‌ನಲ್ಲಿ ಡಿಸೆಂಬರ್ 30ರೊಳಗೆ ನೂತನ ಸರ್ಕಾರ ರಚಿಸುವಂತೆ ಶಿಬುಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖಂಡ ಶಿಬು ಸೋರೆನ್ ಅವರ ಆಹ್ವಾನದ ಮೇರೆಗೆ ಭಾರತೀಯ ಜನತಾ ಪಕ್ಷ, ಅಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್(ಎಐಎಸ್‌ಯು) ಹಾಗೂ ಜನತಾದಳ (ಯು) ಬೆಂಬಲ ನೀಡುವುದರೊಂದಿಗೆ ನೂತನ ಸರ್ಕಾರ ರಚನೆಗಾಗಿ ರಾಜ್ಯಪಾಲರು ಆಹ್ವಾನಿಸಿದ್ದಾರೆ.
ಸರ್ಕಾರ ರಚನೆಯ ಹಿನ್ನೆಲೆಯಲ್ಲಿ ಸೋರೆನ್ ಅವರು ಶನಿವಾರ ರಾಜ್ಯಪಾಲರನ್ನು ಭೇಟಿಯಾಗಿ 81ಸದಸ್ಯ ಬಲವುಳ್ಳ ವಿಧಾನಸಭೆಯಲ್ಲಿ, ತಮಗೆ 42ಶಾಸಕರ ಬೆಂಬಲ ಇರುವ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದರು. ಪಟ್ಟಿಯಲ್ಲಿ ಜೆಎಂಎಂನ 18ಶಾಸಕರು ಸೇರಿದಂತೆ ಬಿಜೆಪಿ ಮತ್ತು ಎಜೆಎಸ್‌ಯು ಶಾಸಕರು ಮತ್ತು ಒರ್ವ ಪಕ್ಷೇತರ ಸೇರಿದ್ದಾರೆ.
ಜಾರ್ಖಂಡ್‌ನಲ್ಲಿ 81ವಿಧಾನಸಭಾ ಕ್ಷೇತ್ರಕ್ಕಾಗಿ ಚುನಾವಣೆ ನಡೆದಿದ್ದು, ಯಾವ ಪಕ್ಷಕ್ಕೂ ಸ್ಪಷ್ಟ ಜನಾದೇಶ ದೊರೆಯದ ಹಿನ್ನೆಲೆಯಲ್ಲಿ ಜಾರ್ಖಂಡ್ ಅತಂತ್ರ ವಿಧಾನಸಭೆ ಏರ್ಪಟ್ಟಿದ್ದು, ಇದೀಗ ಜೆಎಂಎಂ, ಬಿಜೆಪಿ, ಎಜೆಎಸ್‌ಯು ಮೈತ್ರಿಕೂಟದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ.