ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣಕ್ಕೆ ಶುಭಸುದ್ದಿ ನೀಡ್ತೇವೆ ಅಂತಿದೆ ಕೇಂದ್ರ ಸರಕಾರ
(Pranab Mukherjee | Telangana | Andhra Pradesh | Geeta Reddy)
ತೆಲಂಗಾಣಕ್ಕೆ ಶುಭಸುದ್ದಿ ನೀಡ್ತೇವೆ ಅಂತಿದೆ ಕೇಂದ್ರ ಸರಕಾರ
ನವದೆಹಲಿ, ಸೋಮವಾರ, 28 ಡಿಸೆಂಬರ್ 2009( 10:22 IST )
ತೆಲಂಗಾಣ ಪ್ರತ್ಯೇಕ ರಾಜ್ಯ ಕುರಿತು ಯಾವುದೇ ನಿರ್ಧಾರಕ್ಕೆ ಬರಲಾಗದೆ ಒದ್ದಾಡುತ್ತಿರುವ ಕೇಂದ್ರ ಸರಕಾರ ಆ ಪ್ರಾಂತ್ಯದ ಕಾಂಗ್ರೆಸ್ ಸಚಿವರ ನಿಯೋಗಕ್ಕೆ ನೀಡಿದ ಭರವಸೆಯಿದು. ನಿಮಗೆ ಶುಭಸುದ್ದಿ ನೀಡುತ್ತೇವೆ, ರಾಜೀನಾಮೆ ವಾಪಸ್ ಪಡೆದುಕೊಳ್ಳಿ ಎಂದು ಆಂಧ್ರಪ್ರದೇಶದ ಸಚಿವರಿಗೆ ಕೇಂದ್ರ ಸರಕಾರ ಸೂಚಿಸಿದರೂ ತಕ್ಷಣಕ್ಕೆ ಪಟ್ಟು ಸಡಿಲಿಸಲು ಪ್ರಾಂತ್ಯದ ಜನಪ್ರತಿನಿಧಿಗಳು ನಿರಾಕರಿಸಿದ್ದಾರೆ.
ರಾಜ್ಯ ಮಾಹಿತಿ ಮತ್ತು ಪ್ರವಾಸೋದ್ಯಮ ಸಚಿವೆ ಗೀತಾ ರೆಡ್ಡಿ ನೇತೃತ್ವದ 13 ರಾಜ್ಯ ಸಚಿವರನ್ನು ಒಳಗೊಂಡಿದ್ದ ನಿಯೋಗವು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ತೆಲಂಗಾಣ ಪ್ರಾಂತ್ಯದ ಈ ಸಚಿವರು ಕಳೆದ ಕೆಲ ವಾರಗಳ ಹಿಂದೆಯೇ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದರು.
ತೆಲಂಗಾಣ ವಿಚಾರದಲ್ಲಿ ಶೀಘ್ರವೇ ನಿಮಗೆ ಸಿಹಿಸುದ್ದಿ ನೀಡುತ್ತೇವೆ. ದಯವಿಟ್ಟು ನೀವು ನೀಡಿರುವ ರಾಜೀನಾಮೆಗಳನ್ನು ವಾಪಸ್ ಪಡೆದುಕೊಳ್ಳಿ ಎಂದು ಮುಖರ್ಜಿಯವರು ಭರವಸೆ ನೀಡಿದ್ದಾರೆ. ನಾವು ಕೂಡ ಈ ಕುರಿತು ವಿಶೇಷ ಸುದ್ದಿಗಾಗಿ ಕಾಯುತ್ತಿದ್ದೇವೆ ಎಂದು ಸಚಿವ ರೆಡ್ಡಿ ಭೇಟಿಯ ನಂತರ ಪ್ರತಿಕ್ರಿಯೆ ನೀಡಿದ್ದಾರೆ.
ಅವರ ಮನವಿಯಂತೆ ರಾಜೀನಾಮೆಗಳನ್ನು ವಾಪಸು ಪಡೆಯುವ ಕುರಿತು ನಮ್ಮಲ್ಲೇ ಸಮಾಲೋಚನೆ ನಡೆಯಬೇಕಿದೆ. ನಮ್ಮ ಗುರಿ ಹುದ್ದೆ ಅಥವಾ ಅಧಿಕಾರದಲ್ಲಿರಬೇಕೆನ್ನುವುದಲ್ಲ; ತೆಲಂಗಾಣ ಪ್ರಾಂತ್ಯದ ಜನರ ನಿರೀಕ್ಷೆಗಳನ್ನು ಮುಟ್ಟುವುದು. ಅವರ ಆಶಯ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾಗುವುದು, ಅದಕ್ಕಾಗಿ ಹಲವಾರು ಸಮಯದಿಂದ ಅವರು ಕಾಯುತ್ತಿದ್ದಾರೆ. ತೆಲಂಗಾಣ ರಚನೆಗಿದು ಸೂಕ್ತ ಸಮಯ ಎಂದು ಅವರು ಹೇಳಿದ್ದಾರೆ.