ಪುಸ್ತಕದಲ್ಲಿದ್ದದ್ದನ್ನು ಇದ್ದ ಹಾಗೆ ಪಾಠ ಮಾಡಿ ಕೊರಿಯರ್ ಏಜೆಂಟ್‌ಗಳಂತೆ ವರ್ತಿಸಬೇಡಿ. ಮಕ್ಕಳಲ್ಲಿ ಕುತೂಹಲ ಹುಟ್ಟಿಸಿ, ಅವರ ಸಂಶಯಗಳನ್ನು ನಿವಾರಿಸುವ ಕೆಲಸಗಳನ್ನು ಮಾಡುವುದೂ ಶಿಕ್ಷಕರ ಜವಾಬ್ದಾರಿ ಎಂದು ಖ್ಯಾತ ವಿಜ್ಞಾನಿ ಪ್ರೊಫೆಸರ್ ಯಶಪಾಲ್ ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಮಕ್ಕಳು ಬೆಳೆಯುತ್ತಿದ್ದಂತೆ ಕುತೂಹಲವನ್ನೂ ಕಳೆದುಕೊಳ್ಳುತ್ತಾರೆ. ಇದಕ್ಕೆ ನಾವು ಅಂದರೆ ಪ್ರಬುದ್ಧರು ಕಾರಣ. ಕೆಲವೊಂದು ವೈಚಿತ್ರ್ಯಗಳು ಮತ್ತು ಬೆಳವಣಿಗೆಗಳ ಬಗ್ಗೆ ಮಕ್ಕಳು ಅಚ್ಚರಿಗೊಂಡು, ಅದರ ಬಗ್ಗೆ ಪ್ರಶ್ನಿಸಲಾರಂಭಿಸಿದಾಗ, ನಾವು ದೊಡ್ಡವರು ಅದನ್ನು ನಿರ್ಲಕ್ಷಿಸುತ್ತೇವೆ. ಇದರ ಪರಿಣಾಮ, ಪ್ರಶ್ನೆಗಳನ್ನೆತ್ತುವುದರಿಂದ ಏನೂ ಉಪಯೋಗವಾಗದು ಎಂದು ಮಕ್ಕಳು ನಂಬಲಾರಂಭಿಸುತ್ತಾರೆ ಎಂದು 17ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನದ (ಎನ್‌ಸಿಎಸ್‌ಸಿ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಯಶಪಾಲ್ ಹೇಳಿದರು.
WD
ಅದರ ಬದಲು ನಾವು ಅದರಲ್ಲೂ ವಿಶೇಷವಾಗಿ ಶಿಕ್ಷಕರು, ಅಪ್ರಬುದ್ಧ ಮನಸ್ಸುಗಳಲ್ಲಿ ಕೌತುಕವನ್ನು ಸೃಷ್ಟಿಸುವ ಮೂಲಕ ಅವರ ಕುತೂಹಲವನ್ನು ತಣಿಸಲು ಸಹಾಯ ಮಾಡಬೇಕು. ಶಿಕ್ಷಕರೇ ಎಲ್ಲವನ್ನೂ ತಿಳಿದುಕೊಂಡವರಲ್ಲ. ಅವರೂ ಮಕ್ಕಳಿಂದ ಕಲಿಯಬೇಕು. ನೂತನ ವಿಚಾರಗಳತ್ತ ಅವರಲ್ಲಿರುವ ಕೌತುಕವನ್ನು ತಿಳಿದುಕೊಳ್ಳುವುದನ್ನು ನಾವು ಕಲಿಯಬೇಕಾಗಿದೆ. ಮಕ್ಕಳನ್ನು ಯಾವುದೇ ಕಾರಣಕ್ಕೂ ಕೈದಿಗಳಂತೆ ನೋಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಮಕ್ಕಳು ಶಿಕ್ಷಕರ ಶಿಕ್ಷಕರು-- ಯಾಕೆಂದರೆ ಅವರು ಪ್ರಶ್ನೆಗಳನ್ನು ಕೇಳುತ್ತಾರೆ ಎಂದ ಯಶಪಾಲ್, ಶಿಕ್ಷಕರು ತಾವು ಕೊರಿಯರ್ ಏಜೆಂಟ್‌ಗಳಂತೆ ನಡೆದುಕೊಳ್ಳಬಾರದು. ಕೇವಲ ಪುಸ್ತಕದಲ್ಲಿ ಏನಿದೆಯೋ ಅದನ್ನಷ್ಟೇ ಮಕ್ಕಳಿಗೆ ಹೇಳಿಕೊಡುವುದೇ ಶಿಕ್ಷಣ ಅಥವಾ ಪಾಠವಲ್ಲ ಎಂದು ಪ್ರೊಫೆಸರ್ ಯಶಪಾಲ್ ಅಧ್ಯಾಪಕರಿಗೆ ಕಿವಿ ಮಾತು ಹೇಳಿದರು.