ರುಚಿಕಾ ಕಿರುಕುಳ-ಆತ್ಮಹತ್ಯೆಗೆ ಸಿಗುತ್ತಿವೆ ಹೊಸ ತಿರುವುಗಳು
ನವದೆಹಲಿ, ಸೋಮವಾರ, 28 ಡಿಸೆಂಬರ್ 2009( 13:00 IST )
ಹರ್ಯಾಣ ಮಾಜಿ ಡಿಜಿಪಿಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ ರುಚಿಕಾ ಗಿರೋತ್ರಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಸಿಬಿಐ ಬಲಿಪಶುವಿನ ವಿರುದ್ಧ ವರ್ತಿಸಿದೆ ಎಂಬ ಆರೋಪಗಳ ಬೆನ್ನಿಗೆ ಎಸ್.ಪಿ.ಎಸ್. ರಾಥೋರ್ ಬಾಲಕಿಯ ಆತ್ಮಹತ್ಯೆಗೆ ಒತ್ತಾಸೆಯಾಗಿದ್ದರು ಎಂಬ ಹೊಸ ಪ್ರಕರಣ ದಾಖಲಿಸಲು ಆಕೆಯ ಕುಟುಂಬ ಮುಂದಾಗಿದೆ. ಅತ್ತ ಅದೇ ಸಂದರ್ಭದಲ್ಲಿ ರುಚಿಕಾಳನ್ನು ಶಾಲೆಯಿಂದ ಹೊರದಬ್ಬಿದ್ದ ಶಾಲೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದು ಕೂಡ ನ್ಯಾಯಾಲಯದ ಮೆಟ್ಟಿಲೇರಿದೆ.
PTI
ಸಿಬಿಐ ಮೇಲೆ ಪ್ರಭಾವಕ್ಕೆ ಯತ್ನಿಸಿದ್ದರು... 14ರ ಹರೆಯದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿ ಶಿಕ್ಷೆಗೊಳಗಾಗಿರುವ ರಾಥೋಡ್ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸಿದ್ದರು ಎಂಬ ಆರೋಪ ಮಾಡಿರುವುದು ಸಿಬಿಐ ಮಾಜಿ ಜಂಟಿ ನಿರ್ದೇಶಕ ಆರ್.ಎಂ. ಸಿಂಗ್.
ರಾಥೋಡ್ ನನ್ನ ಕಚೇರಿಗೆ ಮತ್ತು ಮನೆಗೂ ಬರಲು ಯತ್ನಿಸಿದ್ದ. ಹಲವು ಬಾರಿ ತನ್ನ ಪರ ತೀರ್ಪು ನೀಡುವಂತೆ ಹಸ್ತಕ್ಷೇಪ ನಡೆಸಲು ಯತ್ನಿಸಿದ್ದ. ನನ್ನ ತಂಡಕ್ಕೂ ಆತ ಇದೇ ರೀತಿಯ ಆಮಿಷಗಳನ್ನು ಒಡ್ಡಲು ಯತ್ನಿಸಿದ್ದ ಎಂದು ಅವರು ಆರೋಪಿಸಿದ್ದಾರೆ.
ರಾಥೋಡ್ ವಿರುದ್ಧ ಹೊಸ ಪ್ರಕರಣ... ಈ ನಡುವೆ ರಾಥೋಡ್ ವಿರುದ್ಧ ರುಚಿಕಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹೊಸ ಪ್ರಕರಣವನ್ನು ದಾಖಲಿಸಲು ಆಕೆಯ ಕುಟುಂಬ ನಿರ್ಧರಿಸಿದೆ.
ಈ ಹಿಂದೆ ಆತ್ಮಹತ್ಯೆ ಪ್ರಕರಣವನ್ನು ರಾಥೋಡ್ ಪ್ರಕರಣಕ್ಕೆ ಸೇರಿಸಲು ಸಿಬಿಐ ಹಿಂದೇಟು ಹಾಕಿದ್ದರ ಪರಿಣಾಮ ರಾಥೋಡ್ ಕಡಿಮೆ ಶಿಕ್ಷೆ ಪಡೆದಿದ್ದಾರೆ. ಹಾಗಾಗಿ ಆತ್ಮಹತ್ಯೆಗೆ ಕಾರಣವಾದ ಪ್ರಕರಣವನ್ನು ರಾಥೋಡ್ ವಿರುದ್ಧ ದಾಖಲಿಸಲು ನಿರ್ಧರಿಸಲಾಗಿದೆ ಎಂದು ರುಚಿಕಾ ಮನೆಯವರು ಹೇಳಿದ್ದಾರೆ.
ಶಾಲೆಯ ವಿರುದ್ಧವೂ ಕೇಸು... ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರುಚಿಕಾಳನ್ನು ಹೊರದಬ್ಬಿದ್ದ ಶಾಲೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಪ್ರಕರಣವೊಂದು ಸೋಮವಾರ ದಾಖಲಾಗಿದೆ.
ರುಚಿಕಾ ಶಾಲಾ ಫೀಸು ಪಾವತಿಸಿಲ್ಲ ಎಂಬ ಕಾರಣ ನೀಡಿದ ಶಾಲೆ ಆಕೆಯನ್ನು ತೆಗೆದು ಹಾಕಿತ್ತು. ಆದರೆ ನಿಜವಾದ ಕಾರಣ ಇದಲ್ಲ. ಇದರ ಹಿಂದೆ ರಾಥೋಡ್ ಕೈವಾಡವಿತ್ತು. ಅವರು ಶಾಲೆಯ ಮುಖ್ಯಸ್ಥರ ಮೇಲೆ ಪ್ರಭಾವ ಬೀರಿ ರುಚಿಕಾಳನ್ನು ವಜಾಗೊಳಿಸಿದ್ದರು ಎಂದು ಬಲಿಪಶುವಿನ ತಂದೆ ಸುಭಾಷ್ ಗಿರೋತ್ರಾ ಆರೋಪಿಸಿದ ಬೆನ್ನಿಗೆ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಾಗಿದೆ.