ರಂಗನಾಥ್ ಮಿಶ್ರಾ ಆಯೋಗ ಶಿಫಾರಸು ಮಾಡಿರುವ ಅಲ್ಪಸಂಖ್ಯಾತರ ಮೀಸಲಾತಿ ವರದಿಯನ್ನು ರದ್ದಿಗೆ ಹಾಕಿ ಎಂದು ಆಗ್ರಹಿಸಿರುವ ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್, ಅಲ್ಪಸಂಖ್ಯಾತರನ್ನು ಮರುವ್ಯಾಖ್ಯಾನಕ್ಕೊಳಪಡಿಸುವ ಅಗತ್ಯವಿದೆ ಎಂದಿದ್ದಾರೆ.
PR
ರಂಗನಾಥ್ ಮಿಶ್ರಾ ಆಯೋಗದ ವರದಿ ಅಸಾಂವಿಧಾನಿಕವಾಗಿದೆ. ಇದನ್ನು ರದ್ದು ಪಡಿಸಲೇಬೇಕು. ಅಲ್ಪಸಂಖ್ಯಾತರನ್ನು ಜಿಲ್ಲಾ ಮಟ್ಟ, ಪ್ರಾದೇಶಿಕ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮರು ವ್ಯಾಖ್ಯಾನಿಸಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಜನಾಥ್ ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಜನಸಂಖ್ಯೆ ಗಮನಾರ್ಹವಾಗಿದೆ. ಇದನ್ನೇ ಪರಿಗಣನೆಗೆ ತೆಗೆದುಕೊಂಡರೂ ಕ್ರಿಶ್ಚಿಯನ್ನರಿಗೆ ನೀಡಲಾಗಿರುವ ಅಲ್ಪಸಂಖ್ಯಾತ ವ್ಯಾಖ್ಯಾನ ಎಷ್ಟು ಸರಿ ಎಂಬಂತೆ ಅವರು ಪ್ರಶ್ನಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಶೇ.10 ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಶೇ.5ರ ಮೀಸಲಾತಿಯನ್ನು ನೀಡಬೇಕು. ಹಿಂದೂ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೂ ಮೀಸಲಾತಿ ನೀಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅವರ ಸಮಿತಿಯು ಶಿಫಾರಸು ಮಾಡಿತ್ತು.
ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಮೀಸಲಾತಿ ನೀಡುವ ಪ್ರಸ್ತಾಪವನ್ನು ಮುಂದಿಡುವ ಮೂಲಕ ಕಾಂಗ್ರೆಸ್ ತಾನೇ ತೋಡಿಕೊಂಡ ಗುಂಡಿಗೆ ಬಿದ್ದಿದೆ. ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದರಿಂದ ರಾಷ್ಟ್ರವಿರೋಧಿ ಮತ್ತು ಮತಾಂತರಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಇತ್ತೀಚೆಗಷ್ಟೇ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮಿಶ್ರಾ ವರದಿಯನ್ನು ತೀವ್ರವಾಗಿ ಖಂಡಿಸಿದ್ದ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಇದು ಅಸಾಂವಿಧಾನಿಕ; ಅಲ್ಲದೆ ಇಸ್ಲಾಮ್ ಹೆಸರಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ನಿರಾಕರಿಸುತ್ತಿರುವವರಿಂದ ದೇಶ ನಾಶಪಡಿಸುವ ಜಿಹಾದಿ ಸಂಚಿದು. ಕುಟುಂಬ ಕಲ್ಯಾಣ ಯೋಜನೆಯನ್ನು ಪಾಲಿಸುತ್ತಿರುವ ಹಿಂದೂ ಪರಿಶಿಷ್ಟರು ಮತ್ತು ಇತರರಿಗೆ ಇದರಿಂದ ಮೋಸವಾದಂತಾಗಿದೆ ಎಂದು ಕಿಡಿ ಕಾರಿದ್ದರು.