ಕಾಂಗ್ರೆಸ್ ನೇತೃತ್ವದ ಪ್ರಜಾಸತ್ತಾತ್ಮಕ ಮೈತ್ರಿಕೂಟ ಮಿತವ್ಯಯ ಸೂತ್ರವನ್ನು ಗಾಳಿಗೆ ತೂರಿ ಹಲವು ತಿಂಗಳುಗಳೇ ಕಳೆದು ಹೋಗಿವೆ ಎಂದು ಆರೋಪಿಸುವವರಿಗೆ ಸಮರ್ಥ ಪ್ರತ್ಯುತ್ತರ ನೀಡಲು ಪ್ರಧಾನಮಂತ್ರಿಗಳ ಕಚೇರಿ ಸಿದ್ಧವಾಗಿದೆ. ತನ್ನ ಕಚೇರಿಗೆ ಅತಿ ಕಡಿಮೆ ದರದಲ್ಲಿ ಸೇವೆ ನೀಡಲು ಸಿದ್ಧವಿರುವ ಮೊಬೈಲ್ ಕಂಪನಿ ಬೇಕಾಗಿದೆ ಎಂದು ಹುಡುಕಾಟ ಆರಂಭಿಸಿರುವುದೇ ಇತ್ತೀಚಿನ ಬೆಳವಣಿಗೆ.
ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ವಿಮಾನದಲ್ಲಿ ಹೋಗುವಾಗ ಇಕಾನಮಿ ದರ್ಜೆಯಲ್ಲೇ ಪ್ರಯಾಣಿಸಬೇಕು ಮತ್ತು ಪಂಚತಾರಾ ಸಂಸ್ಕೃತಿಯಿಂದ ಹಿಂದಕ್ಕೆ ಸರಿಯಬೇಕು ಎಂದು ಸೂಚಿಸಿದ್ದ ಕಾಂಗ್ರೆಸ್, ಮತ್ತೊಂದು ಕಡೆ ಸಚಿವರ ಕುಟುಂಬದವರು, ಸಂಬಂಧಿಕರು ಮತ್ತು ಬೆಂಬಲಿಗರು ಕೂಡ ಉಚಿತವಾಗಿ ವಿಮಾನದಲ್ಲಿ ಪ್ರಯಾಣಿಸಬಹುದು ಎಂಬ ಮಸೂದೆಯನ್ನು ಅಂಗೀಕರಿಸುವ ಮೂಲಕ ಸಾರ್ವಜನಿಕರ ತೀರ್ವ ಟೀಕೆಗೆ ಆಹಾರವಾಗಿತ್ತು.
ಆದರೆ ಇತ್ತ ಉಳಿಕೆಯ ಮತ್ತೊಂದು ತಂತ್ರವನ್ನು ಪ್ರಧಾನಮಂತ್ರಿಗಳ ಕಚೇರಿ ಅನುಸರಿಸಲು ಮುಂದಾಗಿದೆ. ಮೊಬೈಲ್ ಕಂಪನಿಗಳ ನಡುವಿನ ದರ ಸಮರವನ್ನು ಮನಗಂಡಿರುವ ಸರಕಾರ, ತನಗೆ ಅತೀ ಕಡಿಮೆ ದರದಲ್ಲಿ ಸೇವೆ ನೀಡುವ ಕಂಪನಿ ಬೇಕಾಗಿದೆ ಎಂದು ಸೇವಾದಾರರಿಗೆ ಪತ್ರ ಬರೆದಿದೆ.
ಈ ಸಂಬಂಧ ಜನವರಿ 4ರಂದು ಪ್ರಧಾನಿ ಕಚೇರಿಯು ಪತ್ರವೊಂದನ್ನು ಎಲ್ಲಾ ಪ್ರಮುಖ ಮೊಬೈಲ್ ಕಂಪನಿಗಳಿಗೆ ಬರೆದಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ರೋಮಿಂಗ್ ಕರೆಗಳನ್ನು ಕಡಿಮೆ ದರದಲ್ಲಿ ನೀಡುವ ತಮ್ಮ ಯೋಜನೆಗಳ ವಿವರಗಳನ್ನು ನೀಡುವಂತೆ ಕೇಳಿಕೊಂಡಿದೆ.
ಕಚೇರಿಗೆ ಸುಮಾರು 50 ಜಿಎಸ್ಎಂ ಸಂಪರ್ಕಗಳು ಬೇಕಾಗಿದ್ದು, ಅದರಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕರೆ ಮತ್ತು ಎಸ್ಎಂಎಸ್ ಸೌಲಭ್ಯಗಳ ಅಗತ್ಯವಿದೆ; ಹೊಂದಾಣಿಕೆಯಾಗುವ 25 ಬ್ಲಾಕ್‌ಬೆರ್ರಿ ಸಂಪರ್ಕಗಳು, ವಿಶೇಷ ಅಂಕಿಗಳ ಸರಣಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರೋಮಿಂಗ್ ಮತ್ತು ಅವಿರತ ಸಿಗ್ನಲ್‌ಗಳು ಸಿಗುವಂತಹ ಸಂಪರ್ಕಗಳು ಬೇಕಾಗಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಎಲ್ಲಾ ಮೊಬೈಲ್ ಸೇವಾದಾರರು ಜನವರಿ 15ರೊಳಗೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಪ್ರಧಾನಮಂತ್ರಿಯವರ ಕಚೇರಿ ಸೂಚಿಸಿದೆ. ಪ್ರಸಕ್ತ ಕಚೇರಿಯು ಭಾರ್ತಿ ಏರ್‌ಟೆಲ್ ಮೊಬೈಲ್ ಸೇವೆಯನ್ನು ಬಳಕೆ ಮಾಡುತ್ತಿದೆ.