ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರ ಸರಕಾರ ಕರೆದಿದ್ದ ತೆಲಂಗಾಣ ಸರ್ವಪಕ್ಷ ಸಭೆ ವಿಫಲ (P Chidambaram | Telangana | Andhra Pradesh | Congress)
Bookmark and Share Feedback Print
 
ತೆಲಂಗಾಣ ಪ್ರತ್ಯೇಕ ರಾಜ್ಯ ವಿವಾದ ಸಂಬಂಧ ಕೇಂದ್ರ ಸರಕಾರ ಕರೆದಿದ್ದ ಸರ್ವಪಕ್ಷ ಸಭೆ ಅಂತ್ಯಗೊಂಡಿದ್ದು, ಯಾವುದೇ ನಿರ್ಧಾರಕ್ಕೆ ಬರಲು ಗೃಹ ಸಚಿವಾಲಯ ವಿಫಲವಾಗಿದೆ.

ಸಭೆ ಕರೆದಿದ್ದ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಮಾತುಕತೆಯ ಬಳಿಕ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ತೆರಳಿದ್ದು, ಪಕ್ಷಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ತಿಳಿಸಲಿದ್ದೇನೆ ಎಂದು ಹೇಳಿದ್ದಾರೆ.

ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಇನ್ನಷ್ಟು ಸಮಾಲೋಚನೆ ಅಗತ್ಯವಿದೆ. ಎಲ್ಲಾ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿವೆ. ಆಂಧ್ರಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರುವಂತೆ ನಾನು ಮನವಿ ಮಾಡಿದ್ದೇನೆ. ಅವರೆಲ್ಲರ ಅನಿಸಿಕೆಗಳನ್ನು ನಾನು ಪ್ರಧಾನಿಯವರಿಗೆ ವಿವರಿಸಲಿದ್ದೇನೆ ಎಂದು ಚಿದಂಬರಂ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಎಂಟು ರಾಜಕೀಯ ಪಕ್ಷಗಳ 16 ಮುಖಂಡರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ತಮ್ಮ ತಮ್ಮ ಪ್ರಾಂತ್ಯಗಳಿಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ಪ್ರತಿನಿಧಿಗಳು ತಿಳಿಸಿದ್ದು, ಸಭೆಯ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವರು ಈ ಸಂದರ್ಭದಲ್ಲಿ ಮುಖಂಡರಿಂದ ಅನಿಸಿಕೆ-ಅಭಿಪ್ರಾಯವನ್ನು ಸಂಗ್ರಹಿಸಿದರು.

ಸುಮಾರು ನಾಲ್ಕು ಗಂಟೆ 20 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ. ರೋಸಯ್ಯ, ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡ ಕೆ. ಚಂದ್ರಶೇಖರ ರಾವ್, ಪ್ರಜಾರಾಜ್ಯಂ ಮುಖ್ಯಸ್ಥ-ಚಿತ್ರನಟ ಚಿರಂಜೀವಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಸಭೆಯ ನಂತರ ಪ್ರತಿಕ್ರಿಯಿಸಿರುವ ಚಂದ್ರಶೇಖರ ರಾವ್, ನಮ್ಮ ನಿಲುವುಗಳನ್ನು ಕೇಂದ್ರ ಸರಕಾರಕ್ಕೆ ತಿಳಿಸಿದ್ದೇವೆ. ಅವರು ತೆಗೆದುಕೊಳ್ಳುವ ಅಂತಿಮ ನಿರ್ಧಾರವನ್ನು ಆಲಿಸಿದ ಬಳಿಕ ಟಿಆರ್ಎಸ್ ತನ್ನ ಮುಂದಿನ ಹೆಜ್ಜೆಯನ್ನಿಡಲಿದೆ ಎಂದರು.

ಚಿರಂಜೀವಿ ಮಾತನಾಡುತ್ತಾ, ಪ್ರಜಾರಾಜ್ಯಂ ಪಕ್ಷವು ಅಖಂಡ ಆಂಧ್ರಕ್ಕಾಗಿ ಆಗ್ರಹಿಸುತ್ತಿದೆ; ಇಂದು ನಡೆದ ಸಭೆ ತೃಪ್ತಿ ತಂದಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್, ತೆಲುಗು ದೇಶಂ ಪಾರ್ಟಿ, ತೆಲಂಗಾಣ ರಾಷ್ಟ್ರ ಸಮಿತಿ, ಸಿಪಿಐ, ಸಿಪಿಐಎಂ, ಪ್ರಜಾರಾಜ್ಯಂ ಪಾರ್ಟಿ, ಬಿಜೆಪಿ ಮತ್ತು ಮಜೀಸ್ ಇ ಇತೆಹಾದುಲ್ ಮುಸ್ಲಿಮೀನ್ (ಎಂಐಎಂ) ಪಕ್ಷಗಳು ಸಭೆಗೆ ಹಾಜರಾಗುವಂತೆ ಕೇಂದ್ರ ಆಹ್ವಾನ ನೀಡಿತ್ತು.

ಸಂಸತ್ ಹೊರಗೆ ಪ್ರತಿಭಟನೆ....
ಗೃಹ ಸಚಿವರ ಜತೆ ಸರ್ವಪಕ್ಷಗಳ ಸಭೆ ನಡೆಯುತ್ತಿರುವ ಹೊತ್ತಿನಲ್ಲೇ ತೆಲಂಗಾಣ ಪರ ಮತ್ತು ವಿರೋಧ ಬಣಗಳ ಪ್ರತಿಭಟನೆಯೂ ನಡೆಯಿತು. ಎರಡೂ ಬಣಗಳ ಗುಂಪುಗಳು ಘೋಷಣೆಗಳನ್ನು ಕೂಗಿ ಸ್ವಲ್ಪ ಹೊತ್ತು ಉದ್ವಿಗ್ನ ವಾತಾವರಣವನ್ನೇ ಸೃಷ್ಟಿಸಿದ್ದವು.

ಸಭೆ ಆರಂಭವಾಗುತ್ತಿದ್ದಂತೆ ಸಂಸತ್ ಭವನದ ಹೊರಗಡೆ ತೆಲಂಗಾಣ ಪರ ಹೋರಾಟಗಾರರು ಬ್ಯಾನರುಗಳನ್ನು ಹಿಡಿದು ಪ್ರತಿಭಟನೆ ಆರಂಭಿಸಿದ ಸ್ವಲ್ವವೇ ಹೊತ್ತಿನಲ್ಲಿ ಪಕ್ಕದಲ್ಲೇ ಅಖಂಡ ಆಂಧ್ರಕ್ಕೆ ಒತ್ತಾಯಿಸಿ ಮತ್ತೊಂದು ಗುಂಪು ಪ್ರತಿಭಟನೆ ಆರಂಭಿಸಿತು.

ಉಭಯ ಬಣಗಳು ತಮ್ಮ ನಿಲುವಿನ್ನು ಕೇಂದ್ರ ಬೆಂಬಲಿಸಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಿದ್ದ ಕಾರಣ ಪರಿಸ್ಥಿತಿ ಬಿಗಡಾಯಿಸುವ ಹಂತಕ್ಕೆ ತಲುಪಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ