ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೌದಿಯಲ್ಲಿ ಭಾರತದ ಕಾರ್ಮಿಕರನ್ನು ದನಗಳಂತೆ ಮಾರುತ್ತಾರೆ..! (India | Saudi Arabia | Toilet | Passport)
Bookmark and Share Feedback Print
 
ಗಗನಚುಂಬಿ ಕಟ್ಟಡಗಳು, ಕಣ್ಣ ಹುಬ್ಬಿನಂತೆ ಕಾಣುವ ರಸ್ತೆಗಳು ಮತ್ತು ಗರಿಗರಿ ನೋಟುಗಳನ್ನು ನೋಡಬಹುದು ಎಂಬ ಆಸೆಯಿಂದ ಸೌದಿ ಅರೇಬಿಯಾದಂತಹ ವಿದೇಶಗಳಿಗೆ ಹೋದ ಭಾರತೀಯ ಕಾರ್ಮಿಕರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂದು ಅಲ್ಲಿಂದ ತಪ್ಪಿಸಿಕೊಂಡು ವಿಮಾನದ ಶೌಚಾಲಯದಲ್ಲಿ ತಾಯ್ನಾಡಿಗೆ ಮರಳಿದ ನತದೃಷ್ಟ ಮತ್ತು ಅದೃಷ್ಟವಂತರೊಬ್ಬರ ಕಥೆಯನ್ನು ಕೇಳಿ.

ಆತನ ಹೆಸರು ಹಬೀಬ್ ಹುಸೇನ್, ರಾಜಸ್ತಾನದ ಮೊರಾದಾಬಾದ್‌ನವರು. ಕಳೆದ ಕೆಲವು ದಿನಗಳ ಹಿಂದೆ ಅವರು ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಅಡಗಿ ಕುಳಿತು ಸೌದಿ ಅರೇಬಿಯಾದ ಜೀತದಿಂದ ತಪ್ಪಿಸಿಕೊಂಡು ಬಂದಿದ್ದಾರೆ. ತನ್ನಿಬ್ಬರು ಮುದ್ದಾದ ಮಕ್ಕಳು, ಗರ್ಭಿಣಿ ಪತ್ನಿ ಮತ್ತು ವಯಸ್ಸಾದ ತಾಯಿಗಾಗಿ ಇದನ್ನೆಲ್ಲ ಮಾಡಬೇಕಾಯಿತು ಎಂದು ಅವರು ವಿವರಿಸಿದ್ದಾರೆ.
Saudi Flag
PR


ತನ್ನ ಒಂದೆಕರೆ ಜಮೀನನ್ನು 1.25 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿ ಹಣವನ್ನು ನೌಕರಿ ಏಜೆಂಟ್‌ ಕೈಗೆ ತುರುಕಿದ ಮೇಲೆ ಮನೆಯವರಿಗೆ ಕೊಡಲು ಉಳಿದದ್ದು ಕೇವಲ 11 ಸಾವಿರ ರೂಪಾಯಿ ಮಾತ್ರ. 15ರಿಂದ 20 ಸಾವಿರ ಸಂಪಾದನೆ ಮಾಡಬಹುದೆಂಬ ಏಜೆಂಟ್ ಭರವಸೆಯ ಹಿನ್ನೆಲೆಯಲ್ಲಿ ಹೋದ ಹುಸೇನ್‌ಗೆ ಪೈಸೆಯೂ ಸಿಕ್ಕಿಲ್ಲ.

ಇಲ್ಲಿ ನನ್ನ ಕುಟುಂಬ ಉಪವಾಸ ಬಿದ್ದಿತ್ತು. ಅಲ್ಲಿ ನಾನು ಉಪವಾಸ ಬಿದ್ದಿದ್ದೆ. ಸೌದಿಯ ಕೆಲಸಕ್ಕಿಂತ ಊರಿನಲ್ಲಿ 80 ರೂಪಾಯಿಗೆ ಕೂಲಿ ನಾಲಿ ಬದುಕುವುದೇ ಲೇಸು ಅನ್ನುತ್ತಾರವರು.

ವಿಮಾನದಲ್ಲಿ ಹೀಗೆ ಅಕ್ರಮವಾಗಿ ಪ್ರಯಾಣಿಸುವುದರಿಂದ ಸಮಸ್ಯೆಗಳು ಉದ್ಭವವಾಗಬಹುದು ಎಂಬುದು ನನಗೆ ಗೊತ್ತಿತ್ತು. ಆದರೆ ನನ್ನ ದೇಶಬಾಂಧವರ ಬಗ್ಗೆ ನನ್ನಲ್ಲಿ ಭರವಸೆಯಿತ್ತು. ಸೌದಿ ಅರೇಬಿಯಾದಲ್ಲಿ ಬದುಕುವುದಕ್ಕಿಂತ ಭಾರತದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸುವುದು ಉತ್ತಮ ಎಂಬುದು ಹುಸೇನ್ ಅನುಭವದ ಮಾತು.

ಭಾರತದಲ್ಲಿನ ಏಜೆಂಟ್ 50 ಮಂದಿಯನ್ನು ಸೌದಿಗೆ ಪೂರೈಸಬೇಕಿತ್ತು. ನಮ್ಮನ್ನು ಐದು, 10 ಮತ್ತು 20 ಜನರಂತೆ ವಿಂಗಡಿಸಿ ಕೆಲಸಕ್ಕೆ ಹಾಕಲಾಯಿತು. ಮೊದಲು ಹಗಲು ಜೆಡ್ಡಾದಲ್ಲಿ ಕುರಿ ಮೇಯಿಸುವ ಕೆಲಸವನ್ನು ನನಗೆ ನೀಡಲಾಯಿತು. ರಾತ್ರಿ ವಿಮಾನ ನಿಲ್ದಾಣದಲ್ಲಿ ಶುಚಿಗೊಳಿಸುವ ಕೆಲಸ ಮಾಡಬೇಕಿತ್ತು. 14-18 ಗಂಟೆ ಕೆಲಸ ಮಾಡಿದರೂ ನಮಗೆ ಸರಿಯಾದ ಊಟ ನೀಡುತ್ತಿರಲಿಲ್ಲ. ಸಂಬಳವೂ ಇರಲಿಲ್ಲ. ಈ ನಡುವೆ ನಮ್ಮನ್ನು ಹಲವು ಮಂದಿ ಖರೀದಿಸಿ ಕೈ ಬದಲಾಯಿಸಿಕೊಂಡಿದ್ದರು ಎಂದು ತಾನು ಪಟ್ಟ ಪಾಡನ್ನು ವಿವರಿಸಿದ್ದಾನೆ.

ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ ಟಿಪ್ಸ್ ಹಣವನ್ನು ಒಟ್ಟು ಮಾಡಿ ಊರಿಗೆ ವಾಪಸಾಗುವ ನಿರ್ಧಾರಕ್ಕೆ ಬಂದರೂ ಪಾಸ್‌ಪೋರ್ಟ್ ನೀಡಲು ನನ್ನ ಮಾಲಕ ನಿರಾಕರಿಸಿದ. ಹಾಗಾಗಿ ಬ್ಯಾಗುಗಳನ್ನು ಹೊತ್ತೊಯ್ಯುವಾಗ ಕಣ್ತಪ್ಪಿಸಿ ವಿಮಾನದ ಶೌಚಾಲಯದೊಳಗೆ ಅಡಗಿ ಕುಳಿತು ಭಾರತಕ್ಕೆ ಬಂದಿದ್ದೇನೆ ಎನ್ನುವ ಅವರೀಗ ಭಾರತೀಯ ಪೊಲೀಸರ ವಶದಲ್ಲಿದ್ದಾರೆ.

ಸೌದಿಯಲ್ಲಿ ಭಾರತೀಯ ಕಾರ್ಮಿಕರನ್ನು ದನಗಳಂತೆ ಮಾರಾಟ ಮಾಡಲಾಗುತ್ತಿದೆ. ಉತ್ತರ ಪ್ರದೇಶ ಮತ್ತು ಬಂಗಾಲದ ಸಾವಿರಾರು ಮಂದಿ ಅಲ್ಲಿ ಕಠಿಣ ದಿನಗಳನ್ನು ಕಳೆಯುತ್ತಿದ್ದಾರೆ. ಅಲ್ಲಿ ತಲುಪಿದ ಕೂಡಲೇ ಪಾಸ್‌ಪೋರ್ಟ್‌ಗಳನ್ನು ಅಲ್ಲಿನವರು ಕಿತ್ತುಕೊಳ್ಳುವುದರಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ