ಭಾರತದ ಅತ್ಯಾಚಾರಗಳ ರಾಜಧಾನಿ, ಸೆಕ್ಸ್ ಪ್ರವಾಸೋದ್ಯಮ ತಾಣ ಎಂದೆಲ್ಲ ಕೆಟ್ಟ ಹೆಸರುಗಳಿಂದಲೇ ಇತ್ತೀಚೆಗೆ ಗುರುತಿಸಿಕೊಳ್ಳುತ್ತಿರುವ ಗೋವಾ, ಇದನ್ನು ತೊಡೆದು ಹಾಕಲು ಅಮೂಲಾಗ್ರ ಬದಲಾವಣೆಗಳನ್ನು ಮಾಡುವ ಮುನ್ಸೂಚನೆ ನೀಡಿದೆ. ಅದರಂತೆ ಆರಂಭಿಕ ಹಂತವಾಗಿ ಬಿಕಿನಿ ಜಾಹೀರಾತುಗಳಿಗೆ ಕಡಿವಾಣ ಹಾಕುವುದು.
ಗೋವಾ ರಜಾದಿನಗಳ ಕೌಟುಂಬಿಕ ಪ್ರವಾಸಿ ತಾಣವೇ ಹೊರತು ದೈಹಿಕ ತೀಟೆ ತೀರಿಸಿಕೊಳ್ಳುವ ಸೌಲಭ್ಯ ಹೊಂದಿರುವ ಪ್ರವಾಸಿ ರಾಜ್ಯವಲ್ಲ. ಗೋವಾ ಪ್ರವಾಸೋದ್ಯಮವನ್ನು ಬಿಕಿನಿ ಬಾಲೆಯರ ಜಾಹೀರಾತುಗಳ ಮೂಲಕ ಬಿಂಬಿಸುವುದನ್ನು ಮುಂದಿನ ದಿನಗಳಲ್ಲಿ ನೀವು ಕಾಣಲಾರಿರಿ. ಅದರ ಮೇಲೆ ನಾವು ನಿಷೇಧ ಹೇರುತ್ತೇವೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಫ್ರಾನ್ಸಿಸ್ಕೋ ಪಚೆಕೋ ತಿಳಿಸಿದ್ದಾರೆ.
ಯಾವುದೇ ಜಾಹೀರಾತುಗಳಲ್ಲಿ ಅಸಭ್ಯ, ಅಶ್ಲೀಲ ಮತ್ತು ಅರೆನಗ್ನ ಯುವತಿಯರ ಚಿತ್ರಗಳನ್ನು ಬಳಸದಂತೆ ಜಾಹೀರಾತು ಏಜೆನ್ಸಿಗಳಿಗೆ ಆದೇಶ ನೀಡಲಾಗುತ್ತದೆ. ಅಂತಹ ಜಾಹೀರಾತುಗಳನ್ನು ಈಗಾಗಲೇ ಇಲಾಖೆಯು ತಡೆ ಹಿಡಿದಿದೆ. ಇನ್ನು ಮುಂದೆ ಯಾವುದೇ ಜಾಹೀರಾತು ಮುದ್ರಣಕ್ಕೆ ಹೋಗುವ ಮೊದಲು ಸಚಿವಾಲಯದಿಂದ ಪರಿಶೀಲನೆಗೊಳಪಟ್ಟು ಅನುಮತಿ ಪಡೆಯುವುದು ಕಡ್ಡಾಯ ಎಂಬ ನೀತಿಯನ್ನು ಜಾರಿಗೆ ತರಲಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಗೋವಾದಲ್ಲಿ ನಡೆಯುತ್ತಿರುವ ಘಟನೆಗಳು ರಾಜ್ಯಕ್ಕೆ ಮಸಿ ಬಳಿದಿವೆ. ಅದು ವಿದೇಶೀಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಮಾದಕ ದ್ರವ್ಯ ಪ್ರಕರಣಗಳು ಹೀಗೆ ಎಲ್ಲಾ ವಿಚಾರಗಳಲ್ಲೂ ಕೆಟ್ಟ ಹೆಸರನ್ನೇ ಪಡೆದುಕೊಂಡಿದೆ. ರಾಜ್ಯದಲ್ಲಿ ಏಡ್ಸ್ ಪೀಡಿತರ ಸಂಖ್ಯೆ ಹೆಚ್ಚಾಗಿರುವುದನ್ನೂ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ವಚ್ಛಂದ ಲೈಂಗಿಕತೆಗೆ ಕಡಿವಾಣ ಹಾಕುವ ನಿರ್ಧಾರಕ್ಕೆ ಬಂದಿದೆ.
ಈ ಕುರಿತು ಮಾತಿಗಿಳಿದ ಅವರು, ರಾಜ್ಯದ ಬಗ್ಗೆ ಹೆಚ್ಚು ಅಪಪ್ರಚಾರ ಮಾಡಲಾಗಿದೆ ಎಂದು ಮಾಧ್ಯಮಗಳ ಮೇಲೆ ಆರೋಪ ಹೊರಿಸಿದರು. ಆದರೂ ಘಟನೆಯನ್ನು ನಿರಾಕರಿಸದ ಅವರು, ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ನಿಗಾವಹಿಸಲಾಗುತ್ತದೆ. ಪ್ರವಾಸಗಳನ್ನು ಆಯೋಜಿಸುವ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ಮೂಲಕ ರಾಜ್ಯದ ಘನತೆ-ಗೌರವವನ್ನು ಉಳಿಸುವ ಯತ್ನ ನಡೆಸಲಾಗುತ್ತದೆ ಎಂದು ಫೆರ್ನಾಂಡಿಸ್ ತಿಳಿಸಿದ್ದಾರೆ.
ವಿದೇಶೀಯರು ಬೀಚ್‌ಗಳಲ್ಲಿ ಬಿಕಿನಿ ಧರಿಸಿ ಸೂರ್ಯಸ್ನಾನ ಮಾಡುತ್ತಿರುವುದನ್ನು ಸೆಕ್ಸ್ ಪ್ರವಾಸೋದ್ಯಮ ಎಂದು ಕರೆಯಲಾಗದು ಎಂದು ವಾದಿಸಿರುವ ಸಚಿವರು, ಮೈಪೂರ್ತಿ ಬಟ್ಟೆ ಧರಿಸಿಕೊಂಡು ಸ್ನಾನ ಮಾಡುವುದು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದ್ದಾರೆ.