ಮುಂದಿನ ರಾಷ್ಟ್ರೀಯ ಮಹಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು ಕೂಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸು ಹಕ್ಕನ್ನು ಹೊಂದಲಿದ್ದಾರೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ತಮ್ಮ ಮತದಾನದ ಹಕ್ಕಿನ ಮೂಲಕ ಭಾರತವನ್ನು ಯಾರು ಆಳಬೇಕು ಎಂದು ಹೇಳುವ ಸಂಪ್ರದಾಯಬದ್ಧ ಅಭಿಲಾಷೆ ಹೊಂದಿರುವುದನ್ನು ನಾನು ಗುರುತಿಸಿದ್ದೇನೆ ಎಂದು ಅನಿವಾಸಿ ಭಾರತೀಯ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತಾ ಪ್ರಧಾನಿಯವರು ತಿಳಿಸಿದರು.
ಎಂಟನೇ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಗ್, ಅನಿವಾಸಿ ಭಾರತೀಯರ ಬಯಕೆಯನ್ನು ಪೂರೈಸುವ ಕುರಿತು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಮುಂದಿನ ಮಹಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶ ಪಡೆಯಲಿದ್ದಾರೆ ಎಂಬ ಪ್ರಾಮಾಣಿಕರ ಭರವಸೆ ನನ್ನಲ್ಲಿದೆ ಎಂದರು.
ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಗಳಲ್ಲಿರುವ ಭಾರತೀಯರು ತವರಿಗೆ ಮರಳಿ ರಾಜಕೀಯಕ್ಕೆ ಮತ್ತು ಸಾರ್ವಜನಿಕ ಜೀವನಕ್ಕೆ ಯಾಕೆ ಬರಬಾರದು ಎಂಬ ಪ್ರಶ್ನೆಯೂ ನನ್ನಲ್ಲಿದೆ ಎನ್ನುವ ಮೂಲಕ ತನ್ನ ಮತ್ತೊಂದು ಮಹದಾಸೆಯನ್ನು ಸಿಂಗ್ ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.
130 ದೇಶಗಳಲ್ಲಿ ವಾಸಿಸುತ್ತಿರುವ 25 ಮಿಲಿಯನ್ ಭಾರತೀಯರ ಜತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಡೆಸಿಕೊಂಡು ಬರಲಾಗುತ್ತಿರುವ ಈ ವಾರ್ಷಿಕ ಕೂಟದಲ್ಲಿ 50ಕ್ಕೂ ಹೆಚ್ಚು ದೇಶಗಳ ಸುಮಾರು 1,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.