ಇತ್ತೀಚೆಗಷ್ಟೇ ರಾಸಲೀಲೆ ಪ್ರಕರಣ ಬಹಿರಂಗಗೊಂಡು ತೀವ್ರ ಮುಖಭಂಗ ಅನುಭ
PTI
ವಿಸಿದ್ದ ಆಂಧ್ರಪ್ರದೇಶ ಮಾಜಿ ರಾಜ್ಯಪಾಲ ಹಾಗೂ ಅನುಭವಿ ರಾಜಕಾರಣಿ ಎನ್.ಡಿ. ತಿವಾರಿಯವರಿಗೆ ಪಿತೃತ್ವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೆಹಲಿ ಉಚ್ಚ ನ್ಯಾಯಾಲಯ ನೊಟೀಸ್ ಜಾರಿ ಮಾಡಿದೆ.
30ರ ಹರೆಯದ ರೋಹಿತ್ ಶೇಖರ್ ಎಂಬವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಮುಖ್ಯನ್ಯಾಯಮೂರ್ತಿ ಎ.ಪಿ. ಶಾ ಅವರನ್ನೊಳಗೊಂಡ ಪೀಠವು ತಿವಾರಿಯವರಿಗೆ ನೊಟೀಸ್ ಜಾರಿ ಮಾಡಿದ್ದು, ಫೆಬ್ರವರಿ 9ರೊಳಗೆ ಉತ್ತರಿಸುವಂತೆ ಆದೇಶ ನೀಡಿದೆ.
ನನ್ನ ಜೈವಿಕ ತಂದೆ ತಿವಾರಿ ಎಂದು ನ್ಯಾಯಾಲಯ ಘೋಷಿಸಬೇಕೆಂದು ಶೇಖರ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಹಿಂದೆ ಏಕಸದಸ್ಯ ಪೀಠವು ಅವರ ಮನವಿಯನ್ನು ಪ್ರಕರಣ ಕಾಲಮಿತಿಯೊಳಗಿಲ್ಲ ಎಂಬ ಕಾರಣ ಮುಂದೊಡ್ಡಿ ನಿರಾಕರಿಸಿತ್ತು. ಇದೀಗ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ತಿವಾರಿಯವರಿಗೆ ನೊಟೀಸ್ ನೀಡಲಾಗಿದೆ.
ತಿವಾರಿ ಮತ್ತು ನನ್ನ ತಾಯಿ ಉಜ್ವಲಾ ಶರ್ಮಾ ಅವರ ಅಕ್ರಮ ಸಂಬಂಧದಿಂದ ನಾನು ಹುಟ್ಟಿದ್ದು, ಇದನ್ನು ಅಧಿಕೃತವಾಗಿ ಘೋಷಿಸಬೇಕೆಂದು ಕಾನೂನು ಪದವೀಧರರಾಗಿರುವ ಶೇಖರ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅವಧಿ ಮೀರಿದೆ ಎಂದು ಹೈಕೋರ್ಟ್ ಶೇಖರ್ ಅರ್ಜಿಯನ್ನು ತಳ್ಳಿ ಹಾಕಿತ್ತು.
ಮೂವರು ಯುವತಿಯರೊಂದಿಗೆ ರಾಜಭವನದಲ್ಲಿ ತಿವಾರಿ ರಾಸಲೀಲೆ ನಡೆಸಿದ್ದಾರೆ ಎಂದು ಹೇಳಲಾಗಿರುವ ವೀಡಿಯೋ ಒಂದನ್ನು ಆಂಧ್ರಪ್ರದೇಶದ ಎಬಿನ್ ಆಂಧ್ರಜ್ಯೋತಿ ಎಂಬ ಟೀವಿ ಚಾನೆಲ್ ಪ್ರಸಾರ ಮಾಡಿದ ಬೆನ್ನಿಗೆ ಅವರು ಆಂಧ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ವೀಡಿಯೋದಲ್ಲಿ ಯುವತಿಯರ ಜತೆ ತಿವಾರಿ ಬೆತ್ತಲೆಯಾಗಿರುವ ದೃಶ್ಯಗಳನ್ನು ಪ್ರಸಾರ ಮಾಡಿದ ನಂತರ ಅವರ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು. ಇದೀಗ ಪ್ರಕರಣದ ತನಿಖೆ ನಡೆಯುತ್ತಿದೆ.
ಇದರ ಬೆನ್ನಿಗೆ ಪಿತೃತ್ವ ಪ್ರಕರಣವೂ 86ರ ತಿವಾರಿಯವರನ್ನು ಹುಡುಕಿಕೊಂಡು ಬಂದಿದ್ದು, ಅವರ ರಾಜಕೀಯ ಜೀವನದಲ್ಲಿದು ಮಹತ್ವದ ಹಿನ್ನಡೆಯೆಂದೇ ಪರಿಗಣಿಸಲಾಗುತ್ತಿದೆ.