ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಣ್ಣೆದುರೇ ಪೊಲೀಸ್ ಸಾಯುತ್ತಿದ್ದರೂ ರಕ್ಷಿಸದ ತಮಿಳು ಸಚಿವರು (Policeman attacked | minister | Tirunelvelli | Tamil Nadu)
Bookmark and Share Feedback Print
 
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಒಬ್ಬರ ಮೇಲೆ ಗೂಂಡಾಗಳು ದಾಳಿ ಮಾಡಿದ ನಂತರ ರಸ್ತೆಯಲ್ಲಿ ಸಾವು-ಬದುಕಿನ ನಡುವೆ ವಿಲವಿಲನೆ ಒದ್ದಾಡುತ್ತಿದ್ದರೂ ಕಣ್ಣೆದುರಿಗಿದ್ದ ಇಬ್ಬರು ತಮಿಳುನಾಡು ಸಚಿವರು ಸಹಾಯಕ್ಕೆ ಧಾವಿಸದಿರುವ ಭೀಬತ್ಸ ಘಟನೆಯೊಂದು ಇಲ್ಲಿನ ತಿರುನಲ್ವೇಲಿಯಲ್ಲಿ ನಡೆದಿದೆ.

ತಮಿಳುನಾಡಿನ ವೆತ್ರಿವೇಲ್ ಎಂಬ ಸಬ್‌ ಇನ್ಸ್‌ಪೆಕ್ಟರ್ ಮೇಲೆ ಗೂಂಡಾಗಳು ದಾಳಿ ನಡೆಸಿದ ಸ್ವಲ್ಪವೇ ಹೊತ್ತಿನಲ್ಲಿ ಅದೇ ದಾರಿಯಲ್ಲಿ ಬಂದ ಇಬ್ಬರು ಸಚಿವರುಗಳು ಸಹಾಯ ಮಾಡುವ ಬದಲು, ಸಾವು-ಬದುಕಿನ ನಡುವೆ ಒದ್ದಾಡುವುದನ್ನು ದೂರದಿಂದಲೇ ನೋಡಿದ್ದಾರೆ. ಅಗತ್ಯ ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಿಸದ ಕಾರಣ ವೆತ್ರಿವೇಲ್ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾನೆ.

ಸ್ಥಳದಲ್ಲೇ ಇದ್ದ ಹವ್ಯಾಸಿ ಪತ್ರಕರ್ತನೊಬ್ಬ ಇದನ್ನೆಲ್ಲ ವೀಡಿಯೋ ರೆಕಾರ್ಡ್ ಮಾಡಿರುವುದರಿಂದ ಇದೀಗ ಸಚಿವರು ತೀವ್ರ ಟೀಕೆಗೊಳಗಾಗುತ್ತಿದ್ದಾರೆ.

ಘಟನೆ ವಿವರ...
ಕೌಟುಂಬಿಕ ವಿವಾದಗಳ ಕಾರಣದಿಂದಾಗಿ ಎ. ಕಂದಸಾಮಿ ಎಂಬಾತ ಎಸ್ಐ ಶಿವಸುಬ್ರಹ್ಮಣ್ಯಂ ಎಂಬಾತನನ್ನು ಹತ್ಯೆಗೈಯಲು ಯೋಜನೆ ರೂಪಿಸಿದ್ದ. ಆದರೆ ಶಿವಸುಬ್ರಹ್ಮಣ್ಯಂ ಶಬರಿಮಲೆಗೆ ತೆರಳುವ ಮೂಲಕ ಗಂಡಾಂತರದಿಂದ ತಪ್ಪಿಸಿಕೊಂಡಿದ್ದ.

ಅಕಸ್ಮಾತ್ ಅದೇ ದಾರಿಯಲ್ಲಿ ವೆತ್ರಿವೇಲ್ ಬೈಕಿನಲ್ಲಿ ಆಗಮಿಸಿದ್ದ. ದುರದೃಷ್ಟವಶಾತ್ ಎಸ್‌ಐ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸದ ಗ್ಯಾಂಗ್‌ಸ್ಟರ್‌ಗಳು, ಈತನೇ ಶಿವಸುಬ್ರಹ್ಮಣ್ಯಂ ಎಂದುಕೊಂಡು ದಾಳಿ ನಡೆಸಿ ವೆತ್ರಿವೇಲ್ ಅವರ ಕಾಲನ್ನೇ ಕತ್ತರಿಸಿ ಹಾಕಿದ್ದರು.

ದಾಳಿಗೊಳಗಾಗಿ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿರುವ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಬೇರೆಡೆಗೆ ಹೋಗುತ್ತಿದ್ದ ಕ್ರೀಡಾ ಮತ್ತು ಪರಿಸರ ಸಚಿವ ತಿರು ಟಿ.ಪಿ.ಎಂ. ಮೊಹಿದೀನ್ ಖಾನ್ ಹಾಗೂ ಆರೋಗ್ಯ ಸಚಿವ ಎಂ.ಆರ್.ಕೆ. ಪನೀರ್‌ಸೆಲ್ವಂ ತಮ್ಮ ಕಾರನ್ನು ನಿಲ್ಲಿಸಿದ್ದರು.

ಆದರೆ ಇಬ್ಬರೂ ಸಚಿವರು ಕಾರಿನಿಂದ ಇಳಿಯಲೇ ಇಲ್ಲ. ಒದ್ದಾಡುತ್ತಿರುವ ಪೊಲೀಸ್ ಸಹಾಯಕ್ಕಾಗಿ ಗೋಳಾಡುತ್ತಿದ್ದರೂ ಮೊಬೈಲ್ ಮಾತುಕತೆಯಲ್ಲಿ ಅವರು ವ್ಯಸ್ತರಾಗಿದ್ದರು.

ಇವರೊಂದಿಗೆ ಪ್ರಯಾಣಿಸುತ್ತಿದ್ದ ಜಿಲ್ಲಾಧಿಕಾರಿ ಕೂಡ ಎಂಟು ನಿಮಿಷಗಳ ಕಾಲ ಕಾರಿನಿಂದ ಇಳಿದಿರಲಿಲ್ಲ. ತೀವ್ರ ಗಾಯಗೊಂಡು ಹೊರಳಾಡುತ್ತಿದ್ದ ಸಬ್ ಇನ್ಸ್‌ಪೆಕ್ಟರ್‌ನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮನಸ್ಸನ್ನು ಯಾರೂ ಮಾಡಿರಲಿಲ್ಲ.

ಕೊನೆಗೂ ಆಂಬುಲೆನ್ಸ್‌ಗೆ ಕರೆ ಮಾಡಲಾಯಿತಾದರೂ, ಅದು ಬರಲೇ ಇಲ್ಲ. ಘಟನೆಯ 20 ನಿಮಿಷಗಳ ಬಳಿಕ ಕಾರೊಂದರಲ್ಲಿ ಎಸ್‌ಐಯನ್ನು ಹಾಕಲಾಯಿತು. ಆದರೆ ಸಚಿವರು ಈ ಸಂದರ್ಭದಲ್ಲೂ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಎಂದು ಸೌಜನ್ಯಕ್ಕೂ ಹೇಳಿರಲಿಲ್ಲ.

ಘಟನೆ ನಡೆದು ಅಷ್ಟು ಹೊತ್ತಿಗೆ ಸುಮಾರು ಅರ್ಧ ಗಂಟೆಯೇ ಕಳೆದು ಹೋಗಿದ್ದ ಕಾರಣ ತೀವ್ರ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮೊದಲೇ ಎಸ್‌ಐ ಸಾವನ್ನಪ್ಪಿದ. ಸಚಿವರು ಮತ್ತು ಜಿಲ್ಲಾಧಿಕಾರಿ ಏನೂ ಆಗಿಲ್ಲವೆಂಬಂತೆ ತಮ್ಮ ಮುಂದಿನ ಕಾರ್ಯಕ್ರಮಕ್ಕೆ ಹೊರಟು ಹೋದರು!
ಸಂಬಂಧಿತ ಮಾಹಿತಿ ಹುಡುಕಿ