ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರ ಹತ್ಯೆಯಲ್ಲಿ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ಕೈವಾಡವಿದೆ ಎಂಬ ಆಧಾರರಹಿತ ವರದಿ ಬಿತ್ತರಿಸಿದ ಟಿವಿ5 ವಾರ್ತಾವಾಹಿನಿಯ ಇಬ್ಬರು ಸಂಪಾದಕರನ್ನು ಬಂಧಿಸಲಾಗಿದೆ. ಅಲ್ಲದೆ ಟಿವಿ5, ಎನ್‌ಟಿವಿ ಮತ್ತು ಸಾಕ್ಷಿ ಟೀವಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ರಷ್ಯಾದ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ರೆಡ್ಡಿ ಹೆಲಿಕಾಪ್ಟರ್ ದುರಂತಕ್ಕೀಡಾದ ಬೆನ್ನಿಗೆ ಮಾಡಿದ್ದ ಗಾಳಿಸುದ್ದಿಯಾಧರಿತ ವರದಿಯೊಂದನ್ನು ಟಿವಿ5 ಗುರುವಾರ ರಾತ್ರಿ ಬಿತ್ತರಿಸಿತ್ತು. ಇದೇ ಕಾರಣದಿಂದ ರಾಜ್ಯದಾದ್ಯಂತ ಭಾರೀ ಹಿಂಸಾಚಾರಗಳು ನಡೆದಿದ್ದವು.
ಮೂರು ಚಾನೆಲ್‌ಗಳ ಮೇಲೆ ಕೇಸು.. ರೆಡ್ಡಿ ಸಾವಿಗೆ ಸಂಬಂಧ ಕಲ್ಪಿಸಿ ಟಿವಿ5 ಮಾಡಿದ್ದ ವರದಿಗೆ ಸಂಬಂಧಿಸಿದಂತೆ ಚಾನೆಲ್ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅದರ ಇಬ್ಬರು ಸಂಪಾದಕರನ್ನು ಬಂಧಿಸಲಾಗಿದೆ. ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಬ್ರಹ್ಮಾನಂದ ರೆಡ್ಡಿ ಮತ್ತು ಇನ್‌ಪುಟ್ ಎಡಿಟರ್ ವೆಂಕಟಕೃಷ್ಣ ಅವರನ್ನು ಶುಕ್ರವಾರ ರಾತ್ರಿಯೇ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜುಬಿಲಿ ಹಿಲ್ಸ್ ಪೊಲೀಸರು ಹೇಳಿದ್ದಾರೆ.
ಟಿವಿ 5 ಮಾಡಿದ್ದ ವರದಿಯನ್ನು ಮರುಬಿತ್ತರಿಸಿದ ಸಾಕ್ಷಿ ಟಿವಿ ಮತ್ತು ಎನ್‌ಟಿವಿ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಮೂರೂ ಚಾನೆಲ್‌ಗಳ ವಿರುದ್ಧ ಭಾರತೀಯ ದಂಡ ಸಂಹಿತೆ 153-ಎ, 505 (2) ಮತ್ತು ಸೆಕ್ಷನ್ 16ರ ಅಡಿಯಲ್ಲಿ (ಸಮಾಜದ ಗುಂಪುಗಳ ನಡುವೆ ವೈರತ್ವ ಮೂಡಿಸುವ ಯತ್ನ, ಭಿನ್ನ ಸಮುದಾಯಗಳ ನಡುವೆ ಸುಳ್ಳು ಹೇಳಿಕೆ ಅಥವಾ ಗಾಳಿಸುದ್ದಿಗಳ ಮೂಲಕ ಪರಿಸ್ಥಿತಿ ಹದಗೆಡಿಸುವುದು ಮತ್ತು ಕೇಬಲ್ ನೆಟ್‌ವರ್ಕ್ ನಿಯಂತ್ರಣ ಕಾಯ್ದೆ ) ದಾವೆಗಳನ್ನು ಹೂಡಲಾಗಿದೆ.
ಟಿವಿ5 ಸುದ್ದಿ ವಾಹಿನಿಯ ಆಡಳಿತ ನಿರ್ದೇಶಕ ಮತ್ತು ಸಿಬ್ಬಂದಿಗಳು ಹಾಗೂ ಸಾಕ್ಷಿ ಟೀವಿಯ ಸಿಇಒ ರಾಮಿ ರೆಡ್ಡಿ ಮತ್ತು ಸಿಬ್ಬಂದಿಗಳ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಚಾನೆಲ್‌ಗಳು ಪ್ರಸಾರ ಮಾಡಿರುವ ವೀಡಿಯೋ ಟೇಪುಗಳನ್ನು ಪಶಪಡಿಸಿಕೊಳ್ಳಲಾಗಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸಲಾಗುತ್ತದೆ ಎಂದು ಇಲ್ಲಿನ ಡಿಜಿಪಿ ಹೇಳಿದ್ದಾರೆ.
100ಕ್ಕೂ ಹೆಚ್ಚು ದಾಂಧಲೆ ಪ್ರಕರಣ... ಸುದ್ದಿವಾಹಿನಿಗಳ ವರದಿಗಳಿಂದಾಗಿ ರೊಚ್ಚಿಗೆದ್ದ ಜನತೆ ಹಿಂಸಾಚಾರಗಳಲ್ಲಿ ನಿರತರಾದ ಕಾರಣ ಸಾರ್ವಜನಿಕ ಹಾಗೂ ಖಾಸಗಿ ಸೊತ್ತುಗಳು ಅಪಾರ ಹಾನಿಗೀಡಾಗಿದೆ. ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರಿಗೆ ಸೇರಿದ ರಿಲಯೆನ್ಸ್ ಸಂಸ್ಥೆಗಳ ಹಲವು ಮಳಿಗೆಗಳು, ಪೆಟ್ರೋಲ್ ಪಂಪ್‌ಗಳು ಮುಂತಾದೆಡೆ ವೈಎಸ್ಆರ್ ಅಭಿಮಾನಿಗಳು ದಾಳಿ, ದಾಂಧಲೆ ನಡೆಸಿದ್ದರು.
ಈ ಸಂಬಂಧ ಇದುವರೆಗೆ 114 ಪ್ರಕರಣಗಳನ್ನು ದಾಖಲಿಸಲಾಗಿದೆ, 289 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಗಿರೀಶ್ ಕುಮಾರ್ ತಿಳಿಸಿದ್ದಾರೆ. ಅವಹೇಳನಕಾರಿ ಭಾಷಣ, ಹಿಂಸಾಚಾರಕ್ಕೆ ಉತ್ತೇಜನ ಮತ್ತು ಖಾಸಗಿ ಆಸ್ತಿ ಧ್ವಂಸ ಪ್ರಕರಣಗಳನ್ನು ಅವರ ಮೇಲೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುಳ್ಳು ವರದಿಗಳ ಹಿನ್ನೆಲೆಯಲ್ಲಿ ಭಾರೀ ಹಿಂಸಾಚಾರ ನಡೆಯುತ್ತಿದ್ದುದನ್ನು ಕಂಡ ರಾಜ್ಯ ಸರಕಾರವು ಪ್ರಕರಣಗಳನ್ನು ದಾಖಲಿಸುವಂತೆ ಆದೇಶ ನೀಡಿ ಸಿಐಡಿಗೆ ವರ್ಗಾಯಿಸಿತ್ತು.