ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ಗಡಿ ಪ್ರದೇಶದ ಮೇಲೆ ಪಾಕಿಸ್ತಾನ ರಾಕೆಟ್ ದಾಳಿ (Pakistan | India | Punjab border | BSF post)
Bookmark and Share Feedback Print
 
ಶ್ರೀನಗರದಲ್ಲಿನ ರಕ್ತಸಿಕ್ತ ಫಿದಾಯಿನ್ ದಾಳಿಯ ಬೆನ್ನಿಗೆ ಶನಿವಾರ ಜಮ್ಮು ಮತ್ತು ಅಮೃತಸರದಲ್ಲಿನ ಭಾರತದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನ ಭಾರೀ ರಾಕೆಟ್ ಮತ್ತು ಗುಂಡಿನ ದಾಳಿಗಳನ್ನು ನಡೆಸಿದ್ದು, ಎರಡೂ ದೇಶಗಳ ನಡುವಿನ ಶಾಂತಿಭಂಗವಾಗುವ ಭೀತಿ ಕಾಡುತ್ತಿದೆ.

ಶನಿವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಜಮ್ಮು-ಕಾಶ್ರಮೀರದ ಪರ್ಗಾವಲ್ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಪಡೆಗಳು ಅನಪೇಕ್ಷಿತ ದಾಳಿಯಲ್ಲಿ ತೊಡಗಿದವು ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆಂದು ವಾರ್ತಾವಾಹಿನಿಯೊಂದು ವರದಿ ಮಾಡಿದೆ.

ಈ ದಾಳಿ ಹಿನ್ನೆಲೆಯಲ್ಲಿ ಗಡಿ ಪ್ರದೇಶಕ್ಕೆ ಸನಿಹದಲ್ಲಿರುವ ಜಮ್ಮು-ಅಖ್ನೂರ್ ಹೆದ್ದಾರಿ ಪ್ರದೇಶದಲ್ಲಿ ಕಟ್ಟೆಚ್ಚರ ರವಾನಿಸಲಾಗಿದೆ. ಗಡಿ ಪ್ರದೇಶಗಳ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿಯ ದಾಳಿಗಳು ಪಂಜಾಬ್ ಗಡಿ ಪ್ರದೇಶದ ಹಲವು ಗ್ರಾಮಗಳ ಮೇಲೂ ನಡೆದಿವೆ. ಪಾಕಿಸ್ತಾನದ ಶಂಕಿತ ಉಗ್ರಗಾಮಿಗಳು ಏಳು ರಾಕೆಟ್‌ ದಾಳಿ ನಡೆಸಿದ್ದು, ಭಾರತೀಯ ಗಡಿ ಭದ್ರತಾ ಪಡೆ ಮೆಷಿನ್ ಗನ್ ಮತ್ತು ಸ್ವಯಂಚಾಲಿತ ಅಸ್ತ್ರಗಳ ಮೂಲಕ ಪ್ರತಿದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ತಾರಿ ವಲಯದ ಕಂಗಾರ ಚೌಕಿ ಬಳಿಯ ಕೃಷಿ ಭೂಮಿಯಲ್ಲಿ ಶನಿವಾರ ಮುಂಜಾನೆ ರಾಕೆಟ್‌ಗಳು ಪತ್ತೆಯಾಗಿವೆ. ಶನಿವಾರ ಮುಂಜಾನೆ 2ರಿಂದ 3 ಗಂಟೆಯೊಳಗೆ ಪಾಕಿಸ್ತಾನ ಗಡಿ ಪ್ರದೇಶದಿಂದ ರಾಕೆಟ್‌ಗಳು ದಾಳಿ ನಡೆಸಿದ್ದವು. ಇದಕ್ಕೆ ಬಿಎಸ್ಎಫ್ ಪಡೆಗಳು ತಕ್ಷಣವೇ ಮೆಷಿನ್ ಗನ್ ಮತ್ತು ಸ್ವಯಂಚಾಲಿತ ಗನ್‌ಗಳ ಮೂಲಕ ಪ್ರತ್ಯುತ್ತರ ನೀಡಿವೆ.

ನಮ್ಮ ಪಡೆಗಳು ಮರುದಾಳಿ ನಡೆಸಿವೆ. ಹಿರಿಯ ಅಧಿಕಾರಿಗಳು ಈಗಾಗಲೇ ರಾಕೆಟ್ ದಾಳಿ ನಡೆದ ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ. ಪಾಕಿಸ್ತಾನದ ಸೇನಾಧಿಕಾರಿಗಳ ಜತೆ ನಾವು ಮಾತುಕತೆ ನಡೆಸಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಅಧಿಕೃತ ಪ್ರತಿಭಟನೆಯನ್ನು ರವಾನಿಸಿದ್ದೇವೆ ಎಂದು ಪಂಜಾಬ್ ಗಡಿ ಭದ್ರತಾ ಐಜಿಪಿ ಹಿಮಾತ್ ಸಿಂಗ್ ತಿಳಿಸಿದ್ದಾರೆ.

ಪಾಕಿಸ್ತಾನಿ ಮೂಲದ ಶಂಕಿತ ಭಯೋತ್ಪಾದಕರು ಭಾರತದ ಮೇಲೆ ನಡೆಸುತ್ತಿರುವ ಮೂರನೇ ರಾಕೆಟ್ ದಾಳಿಯಿದು. ಕಳೆದ ವರ್ಷದ ಜುಲೈ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಎರಡು ದಾಳಿಗಳನ್ನು ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಬಿಎಸ್ಎಫ್ ತನ್ನ ಪ್ರತಿಭಟನೆಯನ್ನು ಸಲ್ಲಿಸಿದ್ದರೂ, ಪಾಕಿಸ್ತಾನಿ ಪಡೆಗಳು ತಮ್ಮ ಪ್ರಾಂತ್ಯದಿಂದ ಇಂತಹ ಘಟನೆ ನಡೆದಿರುವುದನ್ನು ತಳ್ಳಿ ಹಾಕಿದ್ದರು.

ತಾಲಿಬಾನ್ ಮತ್ತು ಅಲ್‌ಖೈದಾಕ್ಕೆ ಸೇರಿದ ಭಯೋತ್ಪಾದಕರು ಲಾಹೋರ್ ಮತ್ತು ವಾಘಾ ಗಡಿಯ ನಡುವಿನ ಪೊಲೀಸ್ ತರಬೇತಿ ಕೇಂದ್ರವೊಂದಕ್ಕೆ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ದಾಳಿ ನಡೆಸಿ 20 ಸಿಬ್ಬಂದಿಗಳನ್ನು ಕೊಂದು ಹಾಕಿದ್ದರು. ಅತ್ತಾರಿಯಿಂದ ಕೇವಲ 12 ಕಿಲೋ ಮೀಟರ್ ದೂರದಲ್ಲಿರುವ ಈ ತರಬೇತಿ ಕೇಂದ್ರದ ಮೇಲಿನ ದಾಳಿಯಿಂದಾಗಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ಘಟನೆಯಿಂದಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ಭಾರತೀಯ ಗಡಿಯನ್ನು ತಲುಪಲು ಸಮರ್ಥರು ಎಂಬ ಭೀತಿಯನ್ನು ಭಾರತ ವ್ಯಕ್ತಪಡಿಸಿತ್ತು. ಪಾಕಿಸ್ತಾನವು ನಿರಾಕರಿಸಿರುವ ಹೊರತಾಗಿಯೂ ಇಂತಹ ರಾಕೆಟ್ ದಾಳಿಗಳು ಪಾಕ್ ಕಡೆಯಿಂದ ನಡೆಯುತ್ತಿರುವುದು ಇನ್ನಷ್ಟು ಭೀತಿಯನ್ನು ಹುಟ್ಟು ಹಾಕಿದೆ.
ಸಂಬಂಧಿತ ಮಾಹಿತಿ ಹುಡುಕಿ