ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೈನಿಕರ ಸುರಕ್ಷಿತ ಲೈಂಗಿಕತೆಗಾಗಿ ಸರ್ಕಾರದಿಂದ ಕಾಂಡೋಮ್!
(para-military men | condom machines | Government | Safe sex)
ಕುಟುಂಬದಿಂದ ಬಹುಕಾಲ ದೂರ ಉಳಿಯುವ ಅರೆ ಸೇನಾಪಡೆಯ ಸಿಬ್ಬಂದಿಗಳ ಸುರಕ್ಷಿತ ಲೈಂಗಿಕತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ಕೇಂದ್ರ ಸರಕಾರವು, ಸೈನಿಕರು ಉಳಿದುಕೊಳ್ಳುವ ದುರ್ಗಮ ಪ್ರದೇಶಗಳಲ್ಲಿ 1,000ಕ್ಕೂ ಹೆಚ್ಚು ಕಾಂಡೋಮ್ ವಿತರಣಾ ಯಂತ್ರಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಬಂದಿದೆ.
ಸಿಆರ್‌ಪಿಎಫ್, ಸಿಐಎಸ್ಎಫ್, ಎಸ್ಎಸ್‌ಬಿ, ಐಟಿಬಿಪಿ, ಬಿಎಸ್ಎಫ್ ಮತ್ತು ಎನ್‌ಎಸ್‌ಜಿ ಪಡೆಗಳ ಸೈನಿಕರು, ಕಮಾಂಡೋಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗಾಗಿ ಅವರು ಕಾರ್ಯನಿರ್ವಹಿಸುವ ಗಡಿಪ್ರದೇಶದ ವಲಯ ಪ್ರಧಾನ ಕಚೇರಿ ಮತ್ತು ತುಕಡಿಗಳಲ್ಲಿ ಕಾಂಡೋಮ್ ವಿತರಿಸುವ ಯಂತ್ರಗಳನ್ನು ಸ್ಥಾಪಿಸಲಾಗುತ್ತದೆ.
PR
ಅದಕ್ಕಾಗಿ 1,080 ಕಾಂಡೋಮ್ ಯಂತ್ರಗಳನ್ನು ಕೇಂದ್ರ ಗೃಹ ಸಚಿವಾಲಯವು ಒದಗಿಸಿದೆ. ಸುದೀರ್ಘ ಸಮಯ ಬಹುದೂರ ಉಳಿದುಕೊಳ್ಳುವ ಜವಾನರ ಸುರಕ್ಷಿತ ಲೈಂಗಿಕ ಸಂಪರ್ಕವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಂಡೋಮ್‌ಗಳನ್ನು ಒದಗಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಅರೆ ಸೇನಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೈನಿಕರು ದೀರ್ಘ ಸಮಯ ಉಳಿದುಕೊಳ್ಳುವ ವಲಯ ಕಚೇರಿ, ತುಕಡಿ ಕೇಂದ್ರಗಳು, ಗಡಿ ಸಿಪಾಯಿ ನೆಲೆಗಳಲ್ಲಿ ಮೊದಲು ಇಂತಹ ಕಾಂಡೋಮ್ ನೀಡುವ ಯಂತ್ರಗಳನ್ನು ಒದಗಿಸಲಾಗುತ್ತದೆ.
ಕಾಂಡೋಮ್ ಯಂತ್ರಗಳ ಪೂರೈಕೆ ಸೇರಿದಂತೆ ಆರೋಗ್ಯ ಸಂಬಂಧಿ ಖರೀದಿ ಮತ್ತು ಪ್ರಕ್ರಿಯೆಗಳ ನಿರ್ವಹಣೆಗಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ವಿಭಾಗವು ನೋಡಲ್ ಏಜೆನ್ಸಿಯೊಂದನ್ನು ನೇಮಕಗೊಳಿಸಿದೆ.
ವಿವಿಧ ಕಂಪನಿಗಳ ಮತ್ತು ಗುಣಮಟ್ಟದ ಕಾಂಡೋಮ್‌ಗಳನ್ನು ಈ ಯಂತ್ರಗಳ ಮೂಲಕ ಒದಗಿಸಲಾಗುತ್ತದೆ, ಸೈನಿಕರು ತಮಗೆ ಬೇಕಾದ ರೀತಿಯ ಕಾಂಡೋಮ್‌ಗಳನ್ನು ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.