ದಕ್ಷಿಣ ಮುಂಬೈಯಲ್ಲಿನ ಡಾಕ್‌ಯಾರ್ಡ್ ರಸ್ತೆಯ ರೈಲ್ವೇ ನಿಲ್ದಾಣದ ಪಕ್ಕ ಐದು ಅಂತಸ್ತಿನ ಕಟ್ಟಡವೊಂದು ಧರಾಶಾಯಿಯಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದ ಏಳಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.
ಚೆಂಬೂರು ಸಮೀಪದ ಡಾಕ್‌ಯಾರ್ಡ್ ರಸ್ತೆಯಲ್ಲಿನ ಕುಸಿದಿರುವ ನೂರು ವರ್ಷಕ್ಕೂ ಹೆಚ್ಚು ಹಳೆಯ ಐದು ಮಹಡಿಯ ಕಟ್ಟಡ 'ರೇ ಚೇಂಬರ್ಸ್' ಅವಶೇಷಗಳಡಿಯಲ್ಲಿ ಹಲವು ಮಂದಿ ಸಿಲುಕಿದ್ದರು.
ಅಗ್ನಿಶಾಮಕ ದಳ ಸೇರಿದಂತೆ ಪೊಲೀಸರು ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುತ್ತಿದ್ದು, ಇದುವರೆಗೆ ಏಳು ಮಂದಿಯನ್ನು ರಕ್ಷಿಸಲಾಗಿದೆ. ಈಗಲೂ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಕಟ್ಟಡದೊಳಗೆ ಇನ್ನೂ ಸಿಲುಕಿರುವ ಶಂಕೆಯಿದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಮೂಲಗಳು ಹೇಳಿವೆ.
ಈ ಕಟ್ಟಡ ಕುಸಿದು ಬಿದ್ದ ಬೆನ್ನಿಗೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಹೊತ್ತಿನಲ್ಲಿ ಕಟ್ಟಡದ ಮತ್ತೊಂದು ಭಾಗ ಕುಸಿಯಿತಾದರೂ ಅದರಿಂದ ಯಾರಿಗೂ ಅಪಾಯವಾಗಿಲ್ಲ.
ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದರಿಂದ ನಿನ್ನೆಯಷ್ಟೇ ಇದರಲ್ಲಿದ್ದ ನಿವಾಸಿಗಳನ್ನು ತೆರವುಗೊಳಿಸಲಾಗಿತ್ತು. ಇಲ್ಲಿ 63 ಕುಟುಂಬಗಳು ಹಾಗೂ 15 ವ್ಯಾಪಾರಿ ಮಳಿಗೆಗಳಿದ್ದವು. ಅಪಾಯ ಸಂಭವಿಸುವ ಮೊದಲೇ ಬಹುತೇಕ ಮಂದಿ ಕಟ್ಟಡದಿಂದ ಹೊರಗಿದ್ದುದರಿಂದ ಬೃಹತ್ ಅನಾಹುತ ತಪ್ಪಿ ಹೋಗಿದೆ ಎಂದು ಮೂಲಗಳು ಹೇಳಿವೆ.