ಭಾರತವು ನೆರೆಹೊರೆಯ ದೇಶಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಆದರೆ ನಾವು ಯಾರೊಂದಿಗೂ ಯುದ್ಧ ಬಯಸುತ್ತಿಲ್ಲ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತೀಯ ಸೇನಾಪಡೆಯ ಮುಖ್ಯಸ್ಥರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಪತ್ರಕರ್ತರು ಕೇಳಿಕೊಂಡಾಗ ಉತ್ತರಿಸಿದ ಅವರು, ನಮ್ಮಲ್ಲಿ ಹೆಚ್ಚಿನ ಪ್ರಾದೇಶಿಕ ಗುರಿಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
PTI
ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಚೀನಾಗಳೊಂದಿಗೆ ಏಕಕಾಲದಲ್ಲಿ ಯುದ್ಧ ಮಾಡಲು ಶಕ್ತವಾಗಿದೆ ಎಂದು ಸೇನಾ ಮುಖ್ಯಸ್ಥದೀಪಕ್ ಕಪೂರ್ ಇತ್ತೀಚೆಗಷ್ಟೇ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಭಾರತದ ಯುದ್ಧ ತಂತ್ರಗಾರಿಕೆ ಕುರಿತು ಪಾಕಿಸ್ತಾನ ಖಾರವಾಗಿ ಪ್ರತಿಕ್ರಿಯೆ ನೀಡಿರುವುದನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇಂತಹ ಮಿತಿ ಮೀರಿದ ಪ್ರತಿಕ್ರಿಯೆಗಳನ್ನು ಅವರು ಯಾಕೆ ನೀಡುತ್ತಿದ್ದಾರೋ ತಿಳಿಯುತ್ತಿಲ್ಲ, ಭಾರತವು ಯುದ್ಧ ಬಯಸುವ ರಾಷ್ಟ್ರವಲ್ಲ. ಭಿನ್ನಾಭಿಪ್ರಾಯಗಳಿದ್ದರೂ ಸಂಬಂಧಗಳನ್ನು ವೃದ್ಧಿಸಲು ಯತ್ನಿಸುವವರು ನಾವು. ಆದರೆ ದೇಶದ ಪ್ರಾದೇಶಿಕ ಅಖಂಡತೆಯನ್ನು ರಕ್ಷಿಸುವ ನಮ್ಮ ಕಾಳಜಿ ಇದ್ದೇ ಇರುತ್ತದೆ ಎಂದರು.
ಚೀನಾ ಮತ್ತು ಪಾಕಿಸ್ತಾನಗಳ ಜತೆ ಏಕಕಾಲದಲ್ಲಿ ಯುದ್ಧ ಮಾಡಲು ಸಮರ್ಥ ಎಂದಿರುವ ಭಾರತದ ಸಮರ ತಂತ್ರಗಾರಿಕೆಯನ್ನು ಟೀಕಿಸಿದ್ದ ಪಾಕ್, ಇದು ಹಾಸ್ಯಾಸ್ಪದ, ಅಸಂಗತ ಮತ್ತು ಬೇಜವಾಬ್ದಾರಿತನದ ಪರಮಾವಧಿ ಎಂದು ಲೇವಡಿ ಮಾಡಿತ್ತು.
ಭಾರತೀಯ ಕರಾವಳಿ ತಟರಕ್ಷಣಾ ಪಡೆಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಆಂಟನಿ, ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಕಾಶ್ಮೀರದ ಪರಿಸ್ಥಿತಿ ಈಗ ಉತ್ತಮವೆನಿಸುತ್ತಿದೆ ಎಂದರು.
ಕಾಶ್ಮೀರದೊಳಕ್ಕೆ ನುಗ್ಗಲು ಗಡಿ ಪ್ರದೇಶದಾದ್ಯಂತ ಭಾರೀ ಸಂಖ್ಯೆಯ ಉಗ್ರಗಾಮಿಗಳು ಕಾಯುತ್ತಿದ್ದಾರೆ. ಈ ಸಂಬಂಧ ಪಾಕಿಸ್ತಾನ ಯಾವ ಕ್ರಮವನ್ನೂ ಕೈಗೊಳ್ಳದೇ ಇರುವುದರಿಂದ ಇದು ತೀವ್ರ ಕಳವಳಕಾರಿ ವಿಚಾರ ಎಂದು ಅಭಿಪ್ರಾಯಪಟ್ಟರು.
ಭಾರತದಿಂದ ಸಾಕಷ್ಟು ಮನವಿಗಳು ಸಲ್ಲಿಕೆಯಾಗಿರುವ ಹೊರತಾಗಿಯೂ ಪಾಕಿಸ್ತಾನವು ಹೆಚ್ಚಿನ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈಗಲೂ ಅವುಗಳು ಗಡಿಯಾಚೆಗೆ ಸಕ್ರಿಯವಾಗಿವೆ. ನಮ್ಮ ಆಗ್ರಹಗಳಿಗೆ ಪಕ್ಕದ ದೇಶ ಕೇವಲ ಮಾತಿನ ಮೂಲಕವಷ್ಟೇ ಉತ್ತರಿಸುತ್ತಿದೆ ಎಂದು ಸಚಿವರು ತಮ್ಮ ಅಸಹನೆ ವ್ಯಕ್ತಪಡಿಸಿದರು.
ಜಮ್ಮು-ಕಾಶ್ಮೀರದೊಳಗೆ ನುಸುಳಲು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇಶದಲ್ಲಿ 700ಕ್ಕೂ ಹೆಚ್ಚು ಉಗ್ರಗಾಮಿಗಳು ಕಾಯುತ್ತಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸುತ್ತಾ ಅವರು, ಭಾರತವು ಯಾವುದೇ ಪರಿಸ್ಥಿತಿಯನ್ನೆದುರಿಸಲು ಅಗತ್ಯವಿರುವ ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದರು.