ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಪ್ಪಿತಸ್ಥರ ವಿರುದ್ಧ ಯಾಕೆ ಕ್ರಮವಿಲ್ಲ?: ಆಸೀಸ್‌ಗೆ ಭಾರತ
(Australian govt | Racial attacks | India | bilateral relations)
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ದಾಳಿಗಳ ಕುರಿತು ಮಾಧ್ಯಮಗಳು ವರದಿ ಮಾಡುವಾಗ ಸಾಕಷ್ಟು ಸಂಯಮವಹಿಸಬೇಕು, ಇಲ್ಲದಿದ್ದಲ್ಲಿ ದ್ವಿಪಕ್ಷೀಯ ಸಂಬಂಧಗಳು ಕೆಡಬಹುದು ಎಂದು ವಿದೇಶಾಂಗ ಸಚಿವಾಲಯ ಹೇಳುತ್ತಿದ್ದಂತೆಯೇ ಇತ್ತ ಸಾಗರೋತ್ತರ ವ್ಯವಹಾರಗಳ ಸಚಿವಾಲಯವು, ತಪ್ಪಿತಸ್ಥರ ವಿರುದ್ಧ ಆಸ್ಟ್ರೇಲಿಯಾ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದೆ.
ಆಸ್ಟ್ರೇಲಿಯಾದಲ್ಲಿ ಮತ್ತೊಂದು ದಾಳಿ ನಡೆದಿದೆ. ಅವರು ಭರವಸೆ ನೀಡಿದಂತೆ ನಡೆದುಕೊಳ್ಳದೇ ಇರುವುದು ದುರದೃಷ್ಟಕರ. ಇದು ದೇಶದ ಜನತೆ ಹಾಗೂ ಸರಕಾರದ ಪ್ರತಿಯೊಬ್ಬರಿಗೂ ತೀರಾ ನೋವು ತರುವಂತಹ ವಿಚಾರ ಎಂದು ಸಚಿವ ವಯಲಾರ್ ರವಿ ಹೇಳಿದ್ದಾರೆ.
ಅವರು ಆಸ್ಟ್ರೇಲಿಯಾದಲ್ಲಿ ಇಂದು 29ರ ಹರೆಯದ ಜಸ್ಪ್ರೀತ್ ಸಿಂಗ್ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ ಪ್ರಕರಣವನ್ನು ಉಲ್ಲೇಖಿಸುತ್ತಾ, ಆಸ್ಟ್ರೇಲಿಯಾ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಆಕ್ಷೇಪಿಸಿದರು. ಅಲ್ಲದೆ ಇದೇ ಪರಿಸ್ಥಿತಿ ಮುಂದುವರಿದರೆ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹಾಳಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.
ಭಾರತೀಯರ ಮೇಲೆ ದಾಳಿ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಆಸ್ಟ್ರೇಲಿಯಾ ನೀಡಿದ್ದರೂ ಇದುವರೆಗೆ ಯಾವುದೇ ಅಂತಹ ನಡೆ ಕಂಡು ಬಂದಿಲ್ಲ. ತಪ್ಪಿತಸ್ಥರನ್ನು ಬಂಧಿಸಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ ಎಂದರು.
ದಾಳಿಯ ಹಿಂದಿನ ಶಕ್ತಿಗಳ ಅರಿವು ಅಲ್ಲಿನ ಪೊಲೀಸರಿಗಿದೆ. ಅಂತವರನ್ನು ಯಾಕೆ ಬಂಧಿಸಬಾರದು? ದುಷ್ಟ ಶಕ್ತಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆನ್ನುವುದು ಭಾರತದ ಆಗ್ರಹ. ಈ ಬಗ್ಗೆ ನಮ್ಮ ಸರಕಾರ ತೀವ್ರ ಕಳವಳಗೊಂಡಿದ್ದು, ಸಮರ್ಥ ಕ್ರಮಗಳಿಗಾಗಿ ಎದುರು ನೋಡುತ್ತಿದೆ ಎಂದು ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು ಹೇಳಿದ್ದಾರೆ.
ಕೇವಲ ಒಂದೇ ವಾರದ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಇಬ್ಬರು ಭಾರತೀಯರನ್ನು ಕೊಂದು ಹಾಕಲಾಗಿದೆ. ಇಂದಿನ ಘಟನೆಯ ಬಳಿಕ ಆಸ್ಟ್ರೇಲಿಯಾದಲ್ಲಿನ ವಿದ್ಯಾರ್ಥಿಗಳು ತೀವ್ರ ಭೀತಿಯಿಂದಲೇ ಬದುಕುತ್ತಿದ್ದಾರೆ.