ಅಮರ್ ಸಿಂಗ್ ಅವರ ಅಗತ್ಯ ಪಕ್ಷಕ್ಕೆ ಇದೆ. ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ ಎಂದಿರುವ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್ ರಾಜೀನಾಮೆ ಹಿಂಪಡೆಯಬೇಕೆಂದು ಭಾನುವಾರ ಮನವಿ ಮಾಡಿಕೊಳ್ಳುವ ಮೂಲಕ ಸಂಧಾನಕ್ಕೆ ಮುಂದಾಗಿದ್ದಾರೆ.
ಅಚ್ಚರಿಯ ಬೆಳವಣಿಗೆ ಎಂಬಂತೆ ಅನಾರೋಗ್ಯದ ಕಾರಣ ನೀಡಿ ಅಮರ್ ಸಿಂಗ್ ಅವರು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಪಕ್ಷದ ಸಂಸದೀಯ ಮಂಡಳಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಏತನ್ಮಧ್ಯೆ ಅಮರ್ ಸಿಂಗ್ ಅವರ ನಡೆಯನ್ನು ಅನುಸರಿಸಿದ ಬಾಲಿವುಡ್ ನಟ ಸಂಜಯ್ ದತ್ ಕೂಡ ಶನಿವಾರ ರಾತ್ರಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆನ್ನಲಾಗಿದೆ.
ಪಕ್ಷದೊಳಗಿನ ಈ ಎಲ್ಲಾ ಬೆಳವಣಿಗೆ ಮುಲಾಯಂ ಸಿಂಗ್ ಯಾದವ್ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಪಕ್ಷದ ಫೈಯರ್ ಬ್ರಾಂಡ್ ಆಗಿರುವ ಅಮರ್ ಸಿಂಗ್ ಜೊತೆ ಖುದ್ದಾಗಿ ಚರ್ಚೆ ನಡೆಸುವ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ಬಾಲಿವುಡ್ ನಟ ಸಂಜಯ್ ದತ್ ಅವರು ರಾಜೀನಾಮೆ ನೀಡಿರುವ ಬಗ್ಗೆ ಮುಲಾಯಂ ತುಟಿ ಬಿಚ್ಚಿಲ್ಲ. ತಮ್ಮ ಹಿರಿಯ ನಾಯಕರಾದ ಅಮರ್ ಸಿಂಗ್ ಅವರನ್ನು ಪಕ್ಷದಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿ ಬೇಸತ್ತು ತಾನು ಸಹ ಸಮಾಜವಾದಿ ಪಕ್ಷಕ್ಕೆ ಗುಡ್ ಬೈ ಹೇಳಿರುವುದಾಗಿ ದತ್ ತಿಳಿಸಿದ್ದು, ಮತ್ತೆ ಪಕ್ಷಕ್ಕೆ ಸೇರುವ ಕುರಿತು ಮುಂದೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಂಬೈಯಲ್ಲಿನ ತಮ್ಮ ಬಾಂದ್ರಾ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.
ಅಮರ್ ಸಿಂಗ್ ಅವರು ನನ್ನ ಹಿರಿಯಣ್ಣನಿದ್ದಂತೆ, ಯಾವಾಗ ಅವರು ಸಮಾಜವಾದಿ ಪಕ್ಷ ತೊರೆದರೊ, ನಾನು ಕೂಡ ಪಕ್ಷದಲ್ಲಿ ಇರಲ್ಲ. ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ನಾನು ಕೂಡ ಅವರೊಂದಿಗೆ ಕೈ ಜೋಡಿಸುವೆ ಎಂದು ಹೇಳಿದರು.